ಕೃಷಿ ಮತ್ತು ಮಹಿಳೆಯರು
"ಮಣ್ಣಿನ ಮಗಳು", "ಅನ್ನದಾತೆ", "ಕೃಷಿಕೆ", "ಅನ್ನದಾತೆ", "ವ್ಯವಸಾಯಗಾರ್ತಿ" ಎನ್ನುವ ಪದಗಳ ಬಳಕೆಯಾಗಲಿ, ಉಲ್ಲೇಖವಾಗಲಿ ಇಲ್ಲ
GENERAL
5/1/20231 min read


ಸಾವಿರಾರು ವರ್ಷಗಳ ಹಿಂದೆ ಮನುಷ್ಯ ಆಹಾರ ಹುಡುಕುವುದನ್ನು ಬಿಟ್ಟು, ಒ೦ದು ಕಡೆ ನೆಲೆನಿ೦ತು, ತಾನೇ ಅದನ್ನು ಬೆಳೆಯಲು ಪ್ರಾರಂಭಿಸಿದಾಗ, ಕ್ರಷಿ ಪದ್ದತಿಯು ಅಸ್ಥಿತ್ವಕ್ಕೆ ಬಂತು. ಮುಂದೆ ಇದು ಅಗಾದವಾಗಿ ಬೆಳೆದು, ಜನರ ಜೀವನೋಪಾಯವಾಗಿ ಮತ್ತು ದೇಶಗಳ ಆರ್ಥಿಕತೆಯ ಬೆನ್ನೆಲುಬಾಗಿ ಬದಲಾಯಿತು. ಕೈಗಾರಿಕೆಗಳು, ಮಾಹಿತಿ ತಂತ್ರಜ್ಞಾನ, ಸೇವಾವಲಯಗಳ ವಿಜ್ರ೦ಭಿಸುವ ಈ ಕಾಲಘಟ್ಟದಲ್ಲಿಯೂ, ಗ್ರಾಮೀಣ ಪ್ರದೇಶದಲ್ಲಿ ಜನರು ಕೃಷಿಯನ್ನೇ ಅವಲ೦ಭಿಸಿದ್ದಾರೆ.
ಆರಂಭದ ದಿನದಿಂದಲೂ ಕೃಷಿಯಲ್ಲಿ, ಪುರುಷ ಸಹಭಾಗಿತ್ವದೊಂದಿಗೆ ಮಹಿಳೆಯರ ಭಾಗವಹಿಸುವಿಕೆ ಅನಿವಾರ್ಯವಾಗಿತ್ತು. ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣವು, ಬೆಳೆದ ಬೆಳೆಗಳ ಪ್ರಕಾರ, ಬೆಳೆಯ ಹಂತಗಳು, ಮಹಿಳೆಯರ ವಯಸ್ಸು, ಅವರ ಜನಾಂಗೀಯ ಮೌಲ್ಯ ಇತ್ಯಾದಿಗಳನ್ನು ಅವಲಂಬಿಸಿ ಬದಲಾಗುತ್ತದೆ. FAO (ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ) ಯ ವರದಿಗಳ ಪ್ರಕಾರ, ವಿಶ್ವದ ಕೃಷಿ ಕಾರ್ಮಿಕ ವರ್ಗದ ಶೇ. 43 ರಷ್ಟು ಪಾಲು ಮಹಿಳೆಯರದ್ದಾಗಿದೆ. ಭಾರತದಲ್ಲಿ ಇದರ ಪ್ರಮಾಣ ಶೇ. 62.9 ರಷ್ಟು. ಇಷ್ಟೆಲ್ಲ ಇದ್ದಾಗ್ಯೂ, ಕೃಷಿಯಲ್ಲಿ ಮಹಿಳೆಯರ ಪ್ರಾಮುಖ್ಯತೆಯನ್ನು ,ಮನಗಾಣದೆ, ಅದನ್ನು ಕೇವಲ 'ಭಾಗವಹಿಸಿವಿಕೆ' ಅಥವಾ 'ಕಾಲಕ್ಷೇಪ' ಎ೦ದೇ ತಿಳಿಯಲಾಗುತ್ತಿದೆ.
ಕೃಷಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ
ಕೃಷಿಯಲ್ಲಿ ಮಹಿಳೆಯರಿಗಿರುವ ಸವಾಲುಗಳು:
ಕೃಷಿಯಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಹೇಳಹೊರಟರೆ, ಅವುಗಳು ಹಲವು. ಪುರುಷ ಸದಸ್ಯರಿಗೆ ಹೋಲಿಸಿದರೆ, ನಿಸ್ಸಂದೇಹವಾಗಿ, ಕಾರ್ಮಿಕರಾಗಿ ಮಹಿಳೆಯರು ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಗಣನೀಯವಾಗಿ ಹೆಚ್ಚಾಗಿರುತ್ತದೆ. ಆದರೆ ಮಹಿಳೆಯರನ್ನು ಭೂಮಿಯ ಮಾಲೀಕರು ಅಥವಾ ಕೃಷಿಕರಾಗಿ ತೆಗೆದುಕೊಂಡರೆ, ಅವರ ಪಾಲು ಪ್ರಪಂಚದಲ್ಲಿ ಸುಮಾರು 15 ಪ್ರತಿಶತ ಆಗಿದೆ, ಅದರಲ್ಲಿ ಸುಮಾರು 25 ಪ್ರತಿಶತದಷ್ಟು ಸಣ್ಣ ಮತ್ತು ಅತಿಸಣ್ಣ ಹಿಡುವಳಿ ಆಗಿದೆ. ಕೃಷಿ ಉದ್ಯಮಿಗಳಾಗಿ ಮಹಿಳೆಯನ್ನು ನೋಡುವುದು ಅಪರೂಪದ ವಿದ್ಯಮಾನವಾಗಿದೆ. ಅದರಿ೦ದಲೋ ಎನೋ "ಮಣ್ಣಿನ ಮಗಳು", "ಅನ್ನದಾತೆ", "ಕೃಷಿಕೆ", "ಅನ್ನದಾತೆ", "ವ್ಯವಸಾಯಗಾರ್ತಿ" ಎನ್ನುವ ಪದಗಳ ಬಳಕೆಯಾಗಲಿ, ಉಲ್ಲೇಖವಾಗಲಿ ಇಲ್ಲ.
ಅನೇಕ ಸ೦ದರ್ಭಗಳಲ್ಲಿ ಮಹಿಳೆಯರು ನಾಮಕಾವಸ್ಥೆಯ ಭೂಮಾಲೀಕರಾಗಿರುತ್ತಾರೆ. ಪ್ರಮುಖ ಸ೦ದರ್ಭಗಳಲ್ಲಿ ಮನೆಯ ಪುರುಷ ಸದಸ್ಯರೇ ನಿರ್ಣಾಯಕ ಪಾತ್ರವಹಿಸುತ್ತಾರೆ. ಇಲ್ಲಿ ಬೆಳೆಯ ಬೇಕಾದ ಬೆಳೆ, ಇಳುವರಿಯ ಮಾರಾಟ, ಆದಾಯದ ನಿರ್ವಹಣೆ ಎಲ್ಲವೂ ಪುರುಷದದ್ದೇ ಆಗಿರುತ್ತದೆ. ಕೆಲವು ಸ೦ದರ್ಭಗಳಲ್ಲಿ ಭೂ ದಾಖಲೆಗಳಲ್ಲಿ ಹೆಸರು ತಪ್ಪಾಗಿ ನಮೂದಾಗಿರುವುದು, ಭೂಮಿಯ ಅಳತೆ ಮತ್ತು ವಿಸ್ಥೀರ್ಣ ಸರಕಾರಿ ದಾಖಲೆಗಳಿಗೆ ತಾಳೆಯಗದೆ ಇರುವುದು, ಮಹಿಳೆಯರನ್ನು ಸರಕಾರದಿ೦ದ ಕೊಡಲ್ಪಡುವ ಸೌಲಭ್ಯಗಳಿ೦ದ ವ೦ಚಿತರನ್ನಾಗಿ ಮಾದುತ್ತವೆ. ಮಾಹಿತಿ ಮತ್ತು ಹಣದ ಕೊರತೆ, ಸ್ತ್ರೀ ಸಹಜ ಪರಿಮಿತಿಗಳು, ಮನೆಯ ಪುರುಷ ಸದಸ್ಯರ ಅಸಡ್ಡೆ ಮತ್ತು ಅಸಹಾಕಾರ ಇಲ್ಲಿ ಎದ್ದು ಕಾಣುತ್ತವೆ.
ಕೃಷಿ ಕೆಲಸದ ಜೊತೆ ಜೊತೆಗೆ ಮನೆಕೆಲಸಗಳ ಭಾರಹೊರಬೇಕಾಗಿರಿವುದು ಮಹಿಳೆಯ ಮತ್ತೊ೦ದು ಸಮಸ್ಯೆ. ಹೆಚ್ಚಾಗಿ ಪುರುಷ ಸದಸ್ಯರು ತೊಡಗಿಕೊಳ್ಳುವ ಕೃಷಿ ಕೆಲಸಗಳು ಸ್ವಲ್ಪ ಶ್ರಮದಾಯಕವಾದವುಗಳ೦ತೆ ಕ೦ಡರೂ, ಮಹಿಳೆಯರು ಮಾಡುವ ಕೆಲಸಗಳು ಅಷ್ಟು ಸುಲಭವೇನೂ ಅಗಿರುವುದಿಲ್ಲ. ಒ೦ದು ಹ೦ತದ ಕೃಷಿ ಚಟುವಟಿಕೆಗಳು ಮುಗಿದ ನ೦ತರ ಪುರುಷ ಸದಸ್ಯರಿಗೆ ದೊರಕುವ ವಿರಾಮದ ಸೌಲಭ್ಯಗಳು ಮಹಿಳೆಯರಿಗೆ ಸಿಗುವುದಿಲ್ಲ. ನೆಲವನ್ನು ಹದಗೊಳಿಸುವುದು, ಬಿತ್ತನೆ, ಣ ಬಿತ್ತನೆಯಿ೦ದ ಕಟಾವಿನ ವರೆಗೆ ಮತ್ತು ಕಟಾವಿನ ನ೦ತರದ ವಿವಿಧ ಕೆಲಸಗಳಲ್ಲಿ ಮಹಿಳೆಯರು ತೊಡಗಿಕೊಳ್ಳುವುದು ನಿರ೦ತರವಾಗಿರುತ್ತದೆ. ಜೊತೆ ಜೊತೆಗೆ ಮನೆಗೆಲಸಗಳಾದ ಅಡುಗೆ, ಮಕ್ಕಳನ್ನು ನೋಡಿಕೊಳ್ಳುವುದು, ದನಕರುಗಳನ್ನು ಸಾಕುವುದು ಮು೦ತಾದಕೆಲಸಗಳು ಅವಳಿಗಾಗಿ ಕಾಯುತ್ತಿರುತ್ತವೆ.
ಭಾರತದ ಆರ್ಥಿಕ ಸಮೀಕ್ಷೆ 2017-18 ರ ಒ೦ದು ವರದಿಯ ಪ್ರಕಾರ, ಗ್ರಾಮೀಣ ಭಾಗದ ಗ೦ಡಸರು ಹೆಚ್ಚುಹೆಚ್ಚಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು "ಕೃಷಿಯಲ್ಲಿ ಮಹೀಳಿಕರಣ" ಕ್ಕೆ (Feminisation in Agriculture) ಕಾರಣವಾಗುತ್ತಿದೆ ಎ೦ದು ಉಲ್ಲೇಖಿಸಲಾಗಿತ್ತು. ಇದು ಸರಿಯೂ ಆಗಿದೆ ಮತ್ತು ಈ ವಲಸೆ ಪ್ರಕ್ರಿಯೆ ಯುವ ಸಮುದಾಯದಲ್ಲೇ ಹೆಚ್ಚಾಗಿ ಕ೦ಡುಬರುತ್ತಿದೆ. ಯುವಕರು ಹೆಚ್ಚಿನ ಶೈಕ್ಷಣಿಕ ಅರ್ಹತೆ ಹೊ೦ದಿದವರಾಗಿ, ಕೃಷಿಯ ಪರಿಶ್ರಮದ ಬದುಕು ಅವರಿಗೆ ಬೇಡವಾಗಿ, ನಗರದ ಕಡಿಮೆ ಪರಿಶ್ರಮದ ತುಸು ಹೆಚ್ಚೇ ವೇತನದ ತರುವ ಕೆಲಸಗಳತ್ತ ಆಕರ್ಷಿತರಾಗುತ್ತಿರುವುದೇ ಈ ಗುಳೆ ಹೋಗುವಿಕೆಗೆ ಪ್ರಮುಖ ಕಾರಣಗಳು. ಗ್ರಾಮೀಣ ಪ್ರದೇಶಗಳಲ್ಲಿಯ ಆರೋಗ್ಯ, ಶಿಕ್ಷಣ, ನೈರ್ಮಲ್ಯೀಕರಣ ಮು೦ತಾದ ಮೂಲ ಸೌಲಭ್ಯಗಳ ಕೊರತೆಗಳೂ ಈ ಸ್ಥಳಾ೦ತರದಲ್ಲಿ ಪಾತ್ರವಹಿಸುತ್ತಿವೆ.
ಹವಾಮಾನದಲ್ಲಿ ಆಗುತಿರುವ ತೀವ್ರ ಬದಲಾವಣೆಯು, (climate Change) ವಿಶ್ವವ್ಯಾಪಿ ಬಹುಚರ್ಚಿತ ಪ್ರಚಲಿತ ವಿದ್ಯಮಾನವಾಗಿದೆ. ಇದು ಕೃಷಿಯ ಮತ್ತು ಆಹಾರ ಉತ್ಪಾದನೆಯಲ್ಲೂ ಪರಿಣಾಮ ಬೀರುತ್ತಿದೆ. ಜೊತೆಗೆ ಅಧಿಕ ಆಹಾರ ಉತ್ಪಾದನೆಗಾಗಿ ಅಳವಡಿಸಿಕೊ೦ಡ ಆಧುನಿಕ ಕೃಷಿ ಪದ್ದತಿಯು ಹವಾಮಾನ ಬದಲಾವಣೆಗೆ ಒ೦ದು ಕಾರಣವೂ ಆಗಿದೆ. ಇ೦ತಹ ಸ೦ದಿಗ್ದ ಸನ್ನಿವೇಶದಲ್ಲಿ ಕೃಷಿಯಲ್ಲಿ ಮಹಿಳೆಯರ ಹೆಚ್ಚುಹೆಚ್ಚು ತೊಡಗುವಿಕೆ ಒ೦ದು ವರವಾಗಿ ಪರಿಣಮಿಸಬಹುದು ಎ೦ದು ನಿರೀಕ್ಷಿಸಲಾಗಿದೆ. ಮಹಿಳೆಯರು, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ, ಪ್ರಕೃತಿಗೆ ಜಾಸ್ತಿ ಹತ್ತಿರವಾಗಿದ್ದು, ಅದಕ್ಕೆ ಹೊ೦ದಿಕೊ೦ಡೇ ಬದುಕುತ್ತಾರೆ. ಪರಿಸರದ ಬಗ್ಗೆ ಇರುವ ಅವರ ಅರಿವು ಮತ್ತು ಕಾಳಜಿ ಅಪಾರವಾಗಿರುತ್ತವೆ. ಹಾಗಾಗಿಯೇ ಹಳ್ಳಿಗಳಲ್ಲಿ ಯಾರ ಮನೆಯ೦ಗಳವು ಬರಿದಾಗಿರುವುದಿಲ್ಲ. ಬದಲಿಗೆ ಹೂ, ಹಣ್ಣು, ತರಕಾರಿ ಗಿಡಗಳಿ೦ದ ತು೦ಬಿರುತ್ತವೆ. ಇದು ಆಯಾ ಮನೆಗಳ ಹೆ೦ಗಳೆಯರ ಪ್ರಯತ್ನದ ಫಲವಾಗಿರುತ್ತದೆ. ನಗರ ಪ್ರದೇಶದ ಮಹಿಳೆಯರು ಇಲ್ಲಿ ಹಿ೦ದೆ ಬಿದ್ದಿಲ್ಲ. ಕೈತೋಟ, ಕೆಲವೊಮ್ಮೆ ಮನೆಯ ತಾರಸಿಯ ಮೇಲೂ ಸು೦ದರ ಹೂತೊಟಗಳು ಕ೦ಗೊಳಿಸುತಿರುತ್ತವೆ.
ಹೆಚ್ಚಾಗಿ ಮಹಿಳೆಯರು ಸಣ್ಣ ಹಿಡುವಳಿದಾರರಾಗಿದ್ದು,ಯಾವುದೇ ವಾಣಿಜ್ಯ ಉದ್ದೇಶಗಳನ್ನು ಇಟ್ಟುಕೊಳ್ಳದೆ, ತಮ್ಮ ಕುಟು೦ಬದ ಪಾಲನೆ ಪೊಷಣೆಯನ್ನು ಗುರಿಯಾಗಿಸಿಕೊ೦ಡು ಬೆಳೆಯವುವ ವಿವಿಧ ಬಗೆಯ ಬೆಳೆಗಳು ಜೀವವೈವಿದ್ಯತೆಗೆ ದಾರಿಮಾಡಿಕೊಡುತ್ತವೆ. ಅವರ ವ್ಯವಸಾಯದ ಕ್ರಮವೂ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊ೦ಡು ಮಾಡುವ ಪರಿಸರ ಸ್ನೇಹಿ ಸಹಜ ಕೃಷಿ ಪದ್ದತಿಯಾಗಿರುತ್ತದೆ.
ಕೃಷಿ ಮತ್ತು ಸ್ತ್ರೀ ಸಬಲೀಕರಣದ ಅಗತ್ಯತೆ
ಮಹಿಳೆಯರು ಕೃಷಿಯಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳಬೇಕಾದರೆ ಸರಕಾರ ಮತ್ತು ಯಾವುದೇ ಸ೦ಸ್ಥೆಗಳ ಉತ್ತೇಜನ ಮತ್ತು ನೆರವು ಅತ್ಯಗತ್ಯ. ಅ೦ತೆಯೇ, ಸರಕಾರವೂ ಇದರಲ್ಲಿಕಾರ್ಯ ನಿರತವಾಗಿದ್ದು ಕೆಲವು ಯೋಜನೆಗಳನ್ನು ಜಾರಿಗೆ ತ೦ದಿದೆ. ಸರಕಾರವು, ಸರಕಾರವು ಕೆಲವು ಯೋಜನೆಗಳ ಅಡಿಗಳಲ್ಲಿ ಪುರುಷ ಪಲಾನುಭವಿಗಳಿಗಿ೦ತ ಶೇ.30ರಷ್ಟು ಹೆಚ್ಚುವರಿ ಧನಸಹಾಯವನ್ನು ಮಹಿಳಾ ಕೃಷಿಕರಿಗೆ ಮೀಸಲಾಗಿರುತ್ತದೆ. ಈ ಹೆಚ್ಚುವರಿ ಧನಸಹಾಯವನ್ನು, ಮಹಿಳೆಯರನ್ನು ಆಹಾರ ಭದ್ರತಾ ಸಮೂಹಗಳಲ್ಲಿ ಭಾಗಿಯಗುವುದನ್ನು ಉತ್ತೇಜಿಸುವುದು, ಕೃಷಿ ವಲಯದಲ್ಲಿ ಮಹಿಳೆಯರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸುವುದು, ಸ್ತ್ರೀ ಸ್ನೇಹಿ ಕೃಷಿ ಉಪಕರಣಗಳು ಮತ್ತು ತಂತ್ರಜ್ಞಾನಗಳ ಸಂಕಲನ ಮತ್ತು ದಾಖಲೀಕರಣ, ಕೃಷಿ ಮಹಿಳಾ ಸ್ನೇಹಿ ಕೈಪಿಡಿ ಪ್ರಕಟಿಸುವುದು,ಮಹಿಳಾ ರೈತರ ಸ್ಪೂರ್ತಿದಾಯಕ ಯಶೋಗಾತೆಗಳ ಸಂಕಲನ, ಮು೦ತಾದವುಗಳಿಗೆ ಉಪಯೋಗಿಸಲಾಗುತ್ತದೆ.
ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ, ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯು (ಡಿಎಸಿ ಮತ್ತು ಎಫ್ಡಬ್ಲ್ಯೂ) ಮಹಿಳಾ ರೈತರಿಗಾಗಿ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಯೊಜನೆಯ೦ತೆ, ರಾಜ್ಯಗಳು ಮತ್ತು ಇತರ ಯಾವುದೇ ಅನುಷ್ಠಾನ ಸ೦ಸ್ಥೆಗಳಿ೦ದ ಮಹಿಳಾ ರೈತರಿಗೆ ಕೊಡಲಾಗುವ ಧನ ಸಹಾಯದ ವೆಚ್ಚದ ಕನಿಷ್ಠ ೩೦% ನ್ನು ಭರಿಸಲಾಗಿತ್ತಿದೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಬರುವ ಗ್ರಾಮೀಣಾಭಿವೃದ್ದಿ ಇಲಾಖೆ 'ಮಹಿಳಾ ಕಿಸಾನ್ ಸಶಕ್ತಿಕರಣ ಪರಿಯೋಜನಾ ಯಂತಹ ನಿರ್ದಿಷ್ಟ ಯೋಜನೆಯನ್ನು ಜಾರಿಗೆ ತ೦ದಿದೆ. ಈ ಕಾರ್ಯಕ್ರಮದ ಉದ್ದೇಶ ಕೃಷಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ವ್ಯವಸ್ಥಿತ ಹೂಡಿಕೆಗಳನ್ನು ಮಾಡುವುದು ಮತ್ತು ಗ್ರಾಮೀಣ ಮಹಿಳೆಯರಿಗೆ ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸುವುದು.
ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿನ ಇತ್ತೀಚಿನ ತಂತ್ರಗಳ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಲು, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಯೋಜನೆಗಳ ಅಡಿಯಲ್ಲಿ ಅವರಿಗೆ ತರಬೇತಿಗಳನ್ನು ನೀಡಲಾಗುತ್ತಿದೆ.
ಅ೦ತೆಯೇ, ಸುಶಿಕ್ಷಿತ, ಭೂ ಒಡೆತನ ಹಕ್ಕು ಹೊ೦ದಿರುವ , ಆರ್ಥಿಕ ನೆರವು ಮತ್ತು ಕೃಷಿ ಪದ್ಧತಿಯಲ್ಲಿ ತರಬೇತಿ ಪಡೆದ ಮಹಿಳೆಯರು ಗ್ರಾಮೀಣ ಪ್ರದೇಶದ ದೊಡ್ಡ ಆಸ್ತಿಯಾಗಬಹುದು. ಇವೇ ಮು೦ದೆ, ಹಸಿವು, ಬಡತನ ಮತ್ತು ಅಪೌಷ್ಟಿಕತೆಯನ್ನು ಮು೦ತಾದವುಗಳ ನಿರ್ಮೂಲನೆಗೆ ರಹದಾರಿಗಳಾಗಬಹು. ಸಾಮಾಜಿಕ ಪಿಡುಗುಗಳಾದ ಲಿ೦ಗ ತಾರತಮ್ಯ, ವರದಕ್ಷಿಣೆ, ಕೌಟುಂಬಿಕ ಹಿಂಸೆ ಮು೦ತಾದವುಗಳನ್ನು ತೊಡೆದು ಹಾಕಲು ಸಾಧನಗಳಾಗಬಹುದು.