ವನಸುಮಗಳು
ವನಸುಮಗಳು ಕಾಡು ಸಸ್ಯಗಳಲ್ಲಿ ಅರಳಿನಿಁಂತ ಹೂವುಗಳು. ಇವು ಮಾನವನ ಹಸ್ತಕ್ಷೇಪವನ್ನು ಮೀರಿ ಬೆಳೆಯುವ ಸಸ್ಯಗಳಾಗಿವೆ. ಆದರೂ ಇವುಗಳು ಅನೇಕ ರೀತಿಯಲ್ಲಿ ಮನುಕುಲಕ್ಕೆ ಉಪಯೋಗಕ್ಕೆ ಬರುತ್ತವೆ.
NATURE
ಸತೀಶ್ ನಾಯ್ಕ್
4/18/20233 min read


ನಮ್ಮ ಸುತ್ತಮುತ್ತ ಬೆಳೆಯುವ ಅನೇಕ ಸಸ್ಯಗಳನ್ನು ನಮಗೆ ಯುಪಯೊಗಿಯಲ್ಲ ಎ೦ಬ ಕಾರಣಕ್ಕೆ ಉಪೇಕ್ಷಿಸಿರುತ್ತೇವೆ. ಈ ಸಸ್ಯಗಳು ಉಪಯೋಗಿಯಲ್ಲ ಎನ್ನುವುದಕ್ಕಿ೦ತ, ಅವುಗಳ ಉಪಯೋಗ ನಮಗೆ ತಿಳಿದಿರುವುದಿಲ್ಲ ಎನ್ನುವುದು ಹೆಚ್ಚು ಸೂಕ್ತ. ಮನುಷ್ಯನ ಹಸ್ತಕ್ಷೇಪವಿಲ್ಲದೆ ಬೆಳೆಯುವ ಅನೇಕ ಸಸ್ಯಗಳನ್ನು ನಮ್ಮ ಸುತ್ತಮುತ್ತ ಕಾಣುತ್ತೇವೆ. ಇವುಗಳನ್ನು ಕಾಡು ಜಾತಿಯ ಸಸ್ಯಗಳೆ೦ದು ಕರೆಯುತ್ತೇವೆ. ಇವೇ ಸಸ್ಯಗಳು ಬೆಳೆದ ಬೆಳೆಗಳ ನಡುವೆ ಕ೦ಡುಬ೦ದರೆ 'ಕಳೆಗಳು' ಎ೦ದು ಪರಿಗಣಿಸಡುತ್ತವೆ. ಹೀಗಿದ್ದರೂ ಅವು ಮಾನವ ಜೀವನದಲ್ಲಿ, ವಿಶೇಷವಾಗಿ ಹಳ್ಳಿಯ ಜನರ ಜೇವನದಲ್ಲಿ ಸಾಕಷ್ಟು ಪಾತ್ರವನ್ನು ವಹಿಸುತ್ತವೆ. ಅವುಗಳು ಉರುವಲು, ದನಕರುಗಳಿಗೆ ಮೇವು, ಕೃಷಿಯಲ್ಲಿ ಬಹುಮುಖ್ಯವಾಗಿ ಬೇಕಾಗುವ ಹಸಿರೆಲೆ ಗೊಬ್ಬರಕ್ಕಾಗಿ ಸೊಪ್ಪು ತರಗೆಲೆಗಳನ್ನು ಒದಗಿಸುತ್ತವೆ. ವಿವಿಧ ರೀತಿಯ ಸಸ್ಯ-ರಾಸಾಯನಿಕಗಳ (phyto-chemicals) ಉಪಸ್ಥಿತಿಯಿ೦ದ ಅವುಗಳನ್ನು ಔಷಧೀಯವಾಗಿ ಸಸ್ಯ ಗಳಾಗಿಯೂ ಪರಿಗಣಿಸಬಹುದಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕೆಲವು ಗಿಡಗಳಲ್ಲಿ ಉತ್ಪತ್ತಿಯಾಗುವ ರಾಸಾಯನಿಕಗಳು ಮನುಷ್ಯ ಮತ್ತು ಪ್ರಾಣಿಗಳ ದೇಹ ಸೇರಿದರೆ ವಿಶಕಾರಿಯಾಗಿಯೂ ಪರಿಣಮಿಸಬಹುದು.
ಮು೦ದುವರಿದು, ನೈಸರ್ಗಿಕ ಸಮತೋಲನದಲ್ಲಿ ಈ ಸಸ್ಯಗಳ ಪಾತ್ರವನ್ನು ನಿರ್ಲಕ್ಷಿಸುವ೦ತ್ತಿಲ್ಲ. ಅವು ವಿವಿಧ ಸರೀಸೃಪಗಳು ಮತ್ತು ಉಭಯಚರಗಳಿಗೆ (reptiles and amphibians) ಆಶ್ರಯವನ್ನು ಒದಗಿಸುತ್ತವೆ ಮತ್ತು ಹಣ್ಣುಗಳು, ಎಲೆಗಳು ಮತ್ತು ಬೀಜಗಳ ರೂಪದಲ್ಲಿ ಅನೇಕ ಸಸ್ಯಹಾರಿ ಜೀವಿಗಳಿಗೆ (herbivores) ಆಹಾರವನ್ನು ಒದಗಿಸುತ್ತವೆ. ಕೃಷಿಯ ಏಕ ಬೆಳೆ ಪದ್ಧತಿಯ (mono cropping) ಈ ಕಾಲಘಟ್ಟದಲ್ಲಿ ಇ೦ತಹ ಸಸ್ಯ ಸ೦ಕುಲಗಳ ಇರುವಿಕೆಯು ಜೀವವೈವಿಧ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತವೆ, ಬಲವಾದ ಬೇರುಗಳಿ೦ದ ಕೂಡಿದ ಈ ಸಸ್ಯ ಪ್ರಭೇದಗಳು ಮಣ್ಣಿನ ಸವಕಳಿಯನ್ನು ತಡೆಯುತ್ತವೆ.
ಕಾಲಕಾಲಕ್ಕೆ ಇವು ಅರಳಿಸುವ ಸು೦ದರ ಹೂವುಗಳು ಜೇನುನೊಣಗಳು, ಚಿಟ್ಟೆಗಳು, ದು೦ಭಿಗಳು ಮತ್ಥು ಪತ೦ಗಗಳಿಗೆ ಮಕರಂದದ ಮೂಲಗಳಾಗಿವೆ. ಅಷ್ಟೇ ಏಕೆ, ನೀವು ಖರೀದಿಸಿತರುವ, ಆರೋಗ್ಯವರ್ದಕ ಎ೦ದು ಪರಿಗಣಿಸಿರುವ ಜೇನು ಕೂಡ ಈ ಗಿಡಗಳ ಹೂವುಗಳಿ೦ದಲೇ ತಯಾರಿಸಲ್ಪಟ್ಟಿರುತ್ತವೆ. ಅ೦ತಹ ಕೆಲ ಸಸ್ಯಗಳ ಬಗ್ಗೆ ಇಲ್ಲಿ ಅವುಗಳ ಆಕಷ೯ಕ ಹೂವುಗಳ ಚಿತ್ರಗಳೊ೦ದಿಗೆ ವಿವರಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.




ಉಮ್ಮತ್ತಿ ಗಿಡ ಅಥವಾ ದತುರಾ ಗಿಡ, ಇದನ್ನು ವೈಜ್ಞಾನಿಕವಾಗಿ ದತುರಾ ಇನೋಕ್ಸಿಯಾ(Datura innoxia) ಎಂದು ಕರೆಯಲಾಗುತ್ತದೆ. ಇದು ಸೋಲಾನೇಸಿಯೆ (Solanaceae) ಸಸ್ಯ ಕುಟುಂಬಕ್ಕೆ ಸೇರಿದೆ. ಈ ಸಸ್ಯದ ಯಾವುದೇ ಭಾಗವನ್ನು ಜಜ್ಜಿದಾಗ, ಕಟುವಾದ ವಾಸನೆಯನ್ನು ಹೊರಸೂಸುತ್ತದೆ. ಹೂವುಗಳು ತುತ್ತೂರಿಯ ಆಕಾರದಲ್ಲಿರುತ್ತವೆ. ಇಲ್ಲಿ ಹೂವುಗಳು ಅರಳುವ ಮೊದಲು ತಿಳಿಹಳದಿಬಣ್ಣವನ್ನು ಹೊ೦ದಿದ್ದರೆ, ಅರಳಿದ ಬಳಿಕ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಟ್ರೋಪೇನ್ ಎ೦ಬ ಆಲ್ಕಲಾಯ್ಡ್‌ಗಳ ಉಪಸ್ಥಿತಿಯಿಂದಾಗಿ ಸಸ್ಯಗಳ ಯಾವುದೇ ಭಾಗಗಳು ಮನುಷ್ಯರು, ಜಾನುವಾರುಗಳು ಮತ್ತು ಸಾಕುಪ್ರಾಣಿಗಳಿಗೆ ವಿಷಕಾರಿಯಗಿ ಪರಿಣಮಿಸುತ್ತವೆ. ದತುರಾ ಗಿಡವು ಮುಳ್ಳಿನಿ೦ದ ಕೂಡಿದ ಕಾಯಿಗಳನ್ನು ಬಿಡುತ್ತದೆ. ಒಣಗಿದ ಈ ಕಾಯಿಗಳು ಪ್ರಾಣಿಗಳ ಚರ್ಮಕ್ಕೆ ಅ೦ಟಿಕೊಳ್ಳುವುದರ ಮೂಲಕ ಸ್ಥಳಾ೦ತರ ಗೊಳ್ಳುತ್ತವೆ. ಇದರ ಬೀಜಗಳು ಅನೇಕ ವರ್ಷಗಳಕಾಲ ಮಣ್ಣಿನಲ್ಲಿ ಉಳಿಯುತ್ತವೆ.
ಉಮ್ಮತ್ತಿ ಗಿಡ ಅಥವಾ ದತುರಾ ಗಿಡ




ಲ೦ಟಾನ ಕ್ಯಾಮರಾ (Lanatana Camara) ಎ೦ಬ ವೈಜ್ಞಾನಿಕ ಹೆಸರಿನ ಈ ಸಸ್ಯವು ವೆರ್ಬೆನೇಸಿಯ (Verbanaceae) ಕುಟು೦ಬಕ್ಕೆ ಸೇರಿದ ಹೂಬಿಡುವ ಸಸ್ಯವಾಗಿದೆ. ಯಾವುದೇ ಹವಾಮಾನಕ್ಕೂ ಮತ್ತು ಮಣ್ಣಿನ ಗುಣಕ್ಕೂ ಹೊ೦ದಿಕೊಳ್ಳುವ ಇದು, ವಿವಿಧ ಪರಿಸರದಲ್ಲಿ ಸರಾಗವಾಗಿ ಬೆಳೆಯುತ್ತದೆ. ಸಸ್ಯಗಳು ಕೆಲವು ಅಲೆಲೋಪತಿಕ್ ರಾಸಾಯನಿಕಗಳನ್ನು ಉತ್ಪಾದಿಸಿ, ಸುತ್ತಮುತ್ತಲಿನ ಸಸ್ಯಗಳ ಬೆಳವಣಿಗೆಯನ್ನು ನಿಗ್ರಹಿಸುತ್ತದೆ. ಅವುಗಳ ಮೊಳಕೆಯೊಡೆಯುವಿಕೆ, ಬೇರಿನ ಬೆಳವಣಿಗೆ ಮತ್ತು ಹೂಬಿಡುವಿಕೆ ಮೇಲೆ ಪರಿಣಾಮ ಬೀರುತ್ತದೆ. ಕೃಷಿ ಮತ್ತು ಹುಲ್ಲುಗಾವಲು ಭೂಮಿಯಲ್ಲಿ ವೇಗವಾಗಿ ಹರಡುವ ಇದರ ಸಾಮರ್ಥ್ಯವು, ಕೃಷಿ ಮತ್ತು ಜಾನುವಾರು ಸಾಕಣಿಕೆಯ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ.
ಈ ಸಸ್ಯಗಳಲ್ಲಿ ಹೂವುಗಳು ಗೊಂಚಲುಗಳಲ್ಲಿ ಜೋಡಿಸಲ್ಪಟ್ಟಿರುತ್ತವೆ. ಹೂವುಗಳ ಬಣ್ಣವು ಗುಲಾಬಿ, ಕಿತ್ತಳೆ, ಕೆಂಪು, ಬಿಳಿ ಅಥವಾ ಹಳದಿ ಬಣ್ಣಗಳನ್ನು ಹೊ೦ದಿದ್ದು, ಬಣ್ಣವು ಗೊಂಚಲುಗಳಲ್ಲಿ ಅವುಗಳ ಸ್ಥಾನವನ್ನು ಅವಲಂಬಿಸಿ ಬದಲಾಗುತ್ತದೆ. ಪರಾಗಸ್ಪರ್ಶ ಆದ ಮೇಲೆ ಹೂವುಗಳ ಬಣ್ಣದಲ್ಲಿ ಬದಲಾವಣೆ ಕಂಡುಬರುತ್ತದೆ. ಆಗ ಸಾಮಾನ್ಯವಾಗಿ ಹಳದಿಯಿಂದ ಕಿತ್ತಳೆ ಮತ್ತು ಗುಲಾಬಿಯಿಂದ ಕೆಂಪುಬಣ್ಣಕ್ಕೆ ತಿರುಗುತ್ತವೆ. ಲ೦ಟಾನ ಗಿಡದ ಯಾವುದೇ ಭಾಗಗಳು ಜಾನುವಾರುಗಳು ಮತ್ತು ಸಾಕುಪ್ರಾಣಿಗಳಿಗೆ ವಿಷಕಾರಿ ಎಂದು ವರದಿಯಾಗಿದೆ, ಏಕೆಂದರೆ ಸಸ್ಯಗಳು ಕೆಲವು ಸಸ್ಯ ರಾಸಾಯನಿಕಗಳನ್ನು ಉತ್ಪಾದಿಸುತ್ತವೆ ಮತ್ತು ಇದರ ಸೇವನೆಯಿ೦ದ ಯಕೃತ್ತಿನ ಹಾನಿಯಾಗುತ್ತದೆ ಎ೦ದು ತಿಳಿದುಬ೦ದಿದೆ.
ಲ೦ಟಾನ ಗಿಡ:




ಎಕ್ಕದಗಿಡ ಅಥವ ಎಕ್ಕೆಗಿಡ (ಕೆಲವೊಮ್ಮೆ 'ಆರ್ಕ' ಎ೦ದೂ ಕರೆಯಲಗುತ್ತದೆ) ಒ೦ದು ಹೂಬಿಡುವ ಸಸ್ಯವಾಗಿದ್ದು, ಅಪೊಸೈನೇಸಿಯೆ ( Apocynaceae) ಕುಟುಂಬಕ್ಕೆ ಸೇರಿದೆ. ಕ್ಯಾಲಟ್ರೋಪಿಸ್ ಜೈಜಾ೦ಸಿಯ (Calatropis gigantea) ಮತ್ತು ಕ್ಯಾಲಟ್ರೋಪಿಸ್ ಪ್ರೊಸೆರಾ( Calatropis procera), ಎ೦ಬ ಎರಡು ಪ್ರಭೇದಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಗಿಡಗಳು ಹಾಲಿನ೦ನತಹ ದ್ರವವನ್ನು ಸ್ರವಿಸುತ್ಥವೆ. ಸಸ್ಯಗಳು ಬಿಳಿ ಅಥವಾ ನೇರಳೆ ಬಣ್ಣದ ಹೂವುಗಳನ್ನು ಹೊಂದಿರುತ್ತವೆ. ಕ್ಯಾಲಟ್ರೋಪಿಸ್ ಜೈಜಾ೦ಸಿಯ 8 ರಿಂದ 10 ಅಡಿ ಎತ್ತರಕ್ಕೆ ಬೆಳೆದರೆ, ಕ್ಯಾಲಟ್ರೋಪಿಸ್ ಪ್ರೊಸೆರಾ, 3 ರಿಂದ 6 ಅಡಿಗಳ ಎತ್ತರದ್ದಾಗಿರುತ್ತವೆ. ಕ್ಯಾಲಟ್ರೋಪಿಸ್ ಪ್ರೊಸೆರಾ ಪರಿಮಳಯುಕ್ತ ಹೂವನ್ನು ಅರಳಿಸಿದರೆ ಮತ್ತು ಕ್ಯಾಲಟ್ರೋಪಿಸ್ ಗಿಗಾಂಟಿಯಾ ಸಾಮಾನ್ಯ ಹೂವುಗಳನ್ನು ಹೊಂದಿರುತ್ತದೆ. ಸ್ರವಿಸಿದ ಹಾಲಿನ೦ತಹ ದ್ರವದಲ್ಲಿ ಕ್ಯಾಲಟ್ರೋಪಿನ್ಎ೦ಬ ಫೈಟೊಟಾಕ್ಸಿನ್ ಇರುವಿಕೆಯು, ಮನುಷ್ಯರು, ಜಾನುವಾರುಗಳು ಮತ್ತು ಸಾಕುಪ್ರಾಣಿಗಳಿಗೆ ವಿಷಕಾರಿಯಗಿ ಪರಿಣಮಿಸುತ್ತವೆ.
ಎಕ್ಕದಗಿಡ:




ವೈಜ್ಞಾನಿಕವಾಗಿ ಐಪೋಮಿಯಾ ಅಕ್ವಾಟಿಕಾ (Ipomoea aquatica), ಎ೦ದು ಕರೆಯಲಾಗುವ ಈ ಸಸ್ಯಗಳನ್ನು ಅನೇಕ ಭಾಗಗಳಲ್ಲಿ ಅಡುಗೆಗಾಗಿ ಉಪಯೋಗಿಸುತ್ತಾರೆ. ಈ ಸಸ್ಯ ಕನ್ವಲ್ವುಲೇಸಿಯೆ (Convolulaceae) ಕುಟು೦ಬಕ್ಕೆ ಸೇರಿದೆ. ಇವು ಔಗು ಪ್ರದೇಶದ ಮಣ್ಣು ಮತ್ತು ನೀರಿನಲ್ಲಿ ಸಮನಾಗಿ ಬೆಳೆಯುತ್ತವೆ. ಇದನ್ನು ವ್ಯಾಪಕವಾಗಿ ವಾಟರ್ ಸ್ಪಿನಾಚ್ ಎಂದು ಕರೆಯಲಾಗುತ್ತದೆ. ಟೊಳ್ಳಾದ ಕಾ೦ಡವನ್ನು ಹೊ೦ದಿರುವುರದು ನೀರಿನ ಮೇಲೆ ತೇಲಲು ಇವಕ್ಕೆ ಸಹಾಯ ಮಾದುತ್ತವೆ.. ಹೂವುಗಳು ಕಹಳೆಯಾಕಾರದವುಗಳಾಗಿದ್ದು, ಬಿಳಿಯ ಎಸಳುಗಳಿ೦ದ ಕೂಡಿ, ತಿಳಿನೇರಳೆಯ ಮಧ್ಯಭಾಗವನ್ನು ಹೊ೦ದಿರುತ್ತವೆ. ಆಗ್ನೇಯ ಏಷ್ಯಾದ ಅನೇಕ ದೇಶದಲ್ಲಿ ಇದನ್ನು ಮುಖ್ಯ ತರಕಾರಿ ಬೆಳೆಯಾಗಿ ಬೆಳೆಯುತ್ತಾರೆ.
ನೀರು ಹ೦ಬು ಅಥವ ನೀರು ಬಸಲೆ:


ಹೆತ್ತುತ್ತಿ:ಸಿಡಾ ಕಾರ್ಡಿಫೋಲಿಯಾ(Sida cordifolia), ಎ೦ದು ವೈಜ್ಞಾನಿಕ ಹೆಸರುಳ್ಳ ಈ ಸಸ್ಯಗಳು ಮಾಲ್ವೇಸಿಯೆ (Malvaceae) ಕುಟುಂಬಕ್ಕೆ ಸೇರಿವೆ. ಇಲ್ಲಿ ಸಸ್ಯಗಳ ಎಲ್ಲಾ ಭಾಗಗಳೂ ಸಣ್ಣ ಸಣ್ಣ ಕೂದಲುಗಳಿ೦ದ ಆವ್ರತ್ತವಾಗಿರುತ್ತವೆ. ಹೂವುಗಳು ಗಾಢ ಹಳದಿ ಬಣ್ಣ ಹೊಂದಿರುತ್ತವೆ. ಈ ಸಸ್ಯಗಳನ್ನು ಸಂಸ್ಕೃತದಲ್ಲಿ 'ಬಲ' ಎಂದು ಕರೆಯಲಾಗುತ್ತದೆ ಮತ್ತುಆಯುರ್ವೇದದ ಪ್ರಕಾರ ಉತ್ತಮ ಔಷಧೀಯ ಮೌಲ್ಯವನ್ನು ಹೊಂದಿದೆ. ಎಲ್ಲಾ ವಾತವರಣ ಮತ್ತು ಮಣ್ಣಿ ನಲ್ಲಿ ಸುಲಭವಾಗಿ ಮತ್ತು ವೇಗವಾಗಿ ಬೆಳೆಯುವ ಗುಣದಿ೦ದ ಇದನ್ನು ಪ್ರಮುಖ ಕಳೆಯೆ೦ದು ಪರಿಗಣಿಸುತ್ತಾರೆ.
ಹೆತ್ತುತ್ತಿ ಗಿಡ:


ಟ್ರೈಡಾಕ್ಸ್ ಪ್ರೋಕುಂಬೆನ್ಸ್ ( Tridax procumbens ) ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ಇದು ಆಸ್ಟರೇಸಿಯೆ( Asteraceae) ಕುಟುಂಬಕ್ಕೆ ಸೇರಿದೆ. ಇದು ಸಾಮಾನ್ಯವಾಗಿ ಕ೦ಡುಬರುವ ಕಳೆ ಗಿಡವಾಗಿದೆ. ಸಸ್ಯಗಳು ಗಟ್ಟಿಯಾದ ಮತ್ತು ಗರಿ ಮತ್ತು ಕೂದಲುಗಳು ಆವೃತವಾದ ಹಣ್ಣುಗಳನ್ನು ಉತ್ಪಾದಿಸುತ್ತವೆ. ಒಂದೇ ಸಸ್ಯವು ಸಾವಿರಾರು ಇ೦ತಹ ಹಣ್ಣುಗಳನ್ನು ಉತ್ಪಾದಿಸುತ್ತದೆ ಮತ್ತು ಒಣಗಿದ ಈ ಹಣ್ಣುಗಳು ಗಾಳಿಯೊಂದಿಗೆ ಸಾಕಷ್ಟು ದೂರಕ್ಕೆ ಸಾಗುತ್ತವೆ. ಸಸ್ಯಗಳು ಐದು ಬಿಳಿಬಣ್ಣದ ದಳಳಿ೦ದ ಕೂಡಿದ, ಹಳದಿ ಕೇಂದ್ರಿತ ಬಿಳಿ ಹೂವುಗಳನ್ನು ಹೊಂದಿರುತ್ತವೆ. ಸಸ್ಯಗಳು ಪ್ರೊಕುಂಬೆಟಿನ್ ಎಂಬ ಫ್ಲೇವನಾಯ್ಡ್ ಅನ್ನು ಉತ್ಪಾದಿಸುತ್ತವೆ. ಸಾಂಪ್ರದಾಯಿಕವಾಗಿ, ಟ್ರೈಡಾಕ್ಸ್ ಪ್ರೋಕುಂಬೆನ್ಸ್ ಲಿ ಗಾಯವನ್ನು ಗುಣಪಡಿಸಲು ಮತ್ತು ಕೀಟ ನಿವಾರಕವಾಗಿ ಬಳಸಲಾಗುತ್ತದೆ ಎನ್ನುವ ಊಲ್ಲೇಖಗಳಿವೆ.


ಜಯ೦ತಿ ಗಿಡ:
ಇದರ ವೈಜ್ಞಾನಿಕ ಹೆಸರು ಸೆಲೋಸಿಯ ಅರ್ಜೆನ್ಸಿಯ (Celosia argentea) ಮತ್ತು ಇದು ಅಮರಾ೦ತೆಸಿಯೆ (Amaranthaceae) ಕುಟುಂಬಕ್ಕೆ ಸೇರಿದೆ.
ಈ ಸಸ್ಯಗಳು ವಸಂತಋತುವಿನಿ೦ದ ಬೇಸಿಗೆಯವರೆಗೆ ಹೂವು ಬಿಡುತ್ತವೆ. ಹೂವುಗಳು ವೈವಿಧ್ಯಮಯ ಬಣ್ಣ ಮತ್ತು ಹೊಳಪು ಹೊಂದಿರುತ್ತವೆ. ಎಲೆಗಳು ಮತ್ತು ಹೂವುಗಳನ್ನು ಪಶ್ಚಿಮ ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ಭಾಗಗಳಲ್ಲಿ ಅಡುಗೆಯಲ್ಲಿ ಉಪಯೋಗಿಸುತ್ತಾರೆ೦ದು ತಿಳಿಯಲಾಗಿದೆ. ಅಲ೦ಕಾರಿಕ ಸಸ್ಯವಾಗಿಯು ಇವುಗಳನ್ನು ಅನೇಕ ಕಡೆಗಳಲ್ಲಿ ಬೆಳೆಯುತ್ತಾರೆ


ಅಣ್ಣೆ ಸೊಪ್ಪಿನ ಗಿಡ:




ಮುಳ್ಳುಬಳ್ಳಿ ಅಥವಾ ಮೂಗುತಿ ಬಳ್ಳಿ: ಇದರ ವೈಜ್ಞಾನಿಕ ಹೆಸರು ಐಪೊಮಿಯಾ ಎರಿಯೊಕಾರ್ಪಾ (ipomoea eriocarpa) ಮತ್ತು ಇದು ಕನ್ವಲ್ವುಲೇಸಿಯೆ (Convolulaceae) ಸಸ್ಯಕುಟುಂಬಕ್ಕೆ ಸೇರಿದೆ. ಸಸ್ಯವು ನೆಲದ ಮೇಲೆ ಹಬ್ಬುತ್ತಾ ಸಾಗುತ್ತದೆ, ಇಲ್ಲವೆ ಯಾವುದೇ ಆಧಾರ ಸಿಕ್ಕರೆ ಅದಕ್ಕೆ ಸುತ್ತಿಕೊ೦ಡುಬೆಳೆಯುತ್ತದೆ. ಸಸ್ಯಗಳ ಎಲ್ಲಾ ಭಾಗಗಳೂ ಸಣ್ಣ ಸಣ್ಣ ಕೂದಲುಗಳಿ೦ದ ಆವ್ರತ್ತವಾಗಿರುತ್ತವೆ. ಸಸ್ಯವು ಗುಲಾಬಿ ಅಥವಾ ನೇರಳೆ ಬಣ್ಣದ, ಸಣ್ಣ ತೊಟ್ಟನ್ನು ಹೊ೦ದಿರುವ ಗಂಟೆಯ ಆಕಾರದ ಹೂವುಗಳನ್ನು ಅರಳಿಸುತ್ತವೆ.
ಮುಳ್ಳುಬಳ್ಳಿ ಅಥವಾ ಮೂಗುತಿ ಬಳ್ಳಿ




ಬೆ೦ಕಿ ತುತ್ತೂರಿ ಗಿಡ : ಟ್ರ೦ಫೆಟ್ಟಾ ರೊಟ೦ಡಿಫೋಲಿಯಾ (Triumfetta rotundifolia), ಎ೦ದು ವೈಜ್ಞಾನಿಕವಾಗಿ ಕರೆಯಲ್ಪಡುವ ಈ ಗಿಡವು ಮಾಲ್ವೇಸಿಯೆ (Malvaceae) ಕುಟುಂಬಕ್ಕೆ ಸೇರಿದ ಪೊದೆಸಸ್ಯವಾಗಿದೆ. ಇದನ್ನು ಸಾಮಾನ್ಯವಾಗಿ ರೌಂಡ್ ಲೀಫ್ ಬರ್ ಬುಷ್ ಎಂದು ಕರೆಯಲಾಗುತ್ತದೆ. ಇಲ್ಲಿ ಎಲೆಗಳು ದುಂಡಾಗಿರುತ್ತವೆ. ಸಸ್ಯವು ಹಳದಿ ಹೂಗಳನ್ನು ಉತ್ಪಾದಿಸುತ್ತದೆ. ಸಸ್ಯವು ಮೊನಚಾದ ಮುಳ್ಳುಗಳಿ೦ದ ಕೂಡಿದ ಹಣ್ಣುಗಳನ್ನು ಬಿಡುತ್ತದೆ.
ಬೆ೦ಕಿ ತುತ್ತೂರಿ ಗಿಡ




ಗಸಗಸೆ ಹಣ್ಣಿನ ಗಿಡ : ಮುಂಟಿಂಜಿಯ ಕ್ಯಾಲಬುರಾ (Muntingia calabura) ಎನ್ನುವ ವೈಜ್ಞಾನಿಕ ಹೆಸರುಳ್ಳ ಪೊದೆಯ೦ತೆ ಯ೦ತೆ ಬೆಳೆಯುವ ಸಸ್ಯ ಅಥವಾ ಸಣ್ಣಮರವಾಗಿದ್ದು, ಮುಂಟಿಂಜಿಯಸಿಯೆಸಿಯೆ (Muntingiaceae) ಕುಟುಂಬಕ್ಕೆ ಸೇರಿದೆ. ಇದನ್ನು ಡಚ್ ಸಸ್ಯಶಾಸ್ತ್ರಜ್ಞ ಅಬ್ರಹಾಂ ಮಂಟಿಂಗ್ ಅವರ ಗೌರವಾರ್ಥವಾಗಿ ಹೆಸರಿಸಲಾಗಿದೆ. ಐದು ದಳಗಳುಳ್ಳ ಹೂವುಗಳು ಒ೦ದೊ೦ದಾಗಿ ಅಥವ ಗು೦ಪು ಗು೦ಪಾಗಿ ಅರಳುತ್ತವೆ. ಮರವನ್ನು ಉರುವಲಿಗಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಅಲಂಕಾರಿಕ ಮತ್ತು ನೆರಳಿನ ಉದ್ದೇಶಗಳಿಗಾಗಿ, ಕೆಲವೊಮ್ಮೆ ಜೇನುಸಾಕಣೆ ಉದ್ಯಮಗಳಲ್ಲಿ ಮಕರಂದದ ಮೂಲಕ್ಕಾಗಿಯೂ ಬಳಸಲ್ಪಡುತ್ತವೆ. ಸಸ್ಯ ಗಳು ಸಣ್ಣ ಹಣ್ಣುಗಳನ್ನು ಬಿಡುತ್ತವೆ ಮತ್ತು ಕೆಲವು ಕಡೆ ಹಣ್ಣುಗಳನ್ನು ತಿನ್ನಲು ಉಪಯೋಗಿಸುತ್ತಾರೆ. ಎಲೆಗಳ ಕೆಲವು ಔಷದೀಯ ಉಪಯೋಗಗಳ ಬಗ್ಗೆಯೂ ವರಧಿಯಾಗಿವೆ.
ಗಸಗಸೆ ಹಣ್ಣಿನ ಗಿಡ




ಕೊಳವಳಿಕೆ ಗಿಡ: ಹೈಗ್ರೊಫಿಲಾ ಆರಿಕ್ಯುಲಾಟಾ (Hygrophila auriculata ) ಎ೦ಬ ವೈಜ್ಞಾನಿಕ ಹೆಸರಿನ ಈ ಸಸ್ಯ ಅಕಾಂಥಸ್ (Acanthus) ಕುಟುಂಬಕ್ಕೆ ಸೇರಿದೆ. ಇದು ಸಾಮಾನ್ಯವಾಗಿ ಜವುಗು ಪ್ರದೇಶದಲ್ಲಿ ಬೆಳೆಯುತ್ತದೆ, ಆದ್ದರಿಂದ ಇದನ್ನು ಮಾರ್ಷ್ ಬಾರ್ಬೆಲ್ ಎಂದು ಕರೆಯಲಾಗುತ್ತದೆ. ಸಸ್ಯದ ಕಾ೦ಡಗಳು ಕೂದಲುಗಳಿ೦ದ ಆವರಿಸಲ್ಪಟ್ಟಿದ್ದು, ಈ ಕೂದಲುಗಳು ಕಾ೦ಡದ ಗ೦ಟುಗಳಲ್ಲಿ ಹೆಚ್ಚು ಗಡಸಾಗಿದ್ದು ಮುಳ್ಳಿನ೦ತಿರುತ್ತವೆ. ಹೂವುಗಳು ನೇರಳೆ ಬಣ್ಣವನ್ನು ಹೊಂದಿರುತ್ತವೆ. ಸಸ್ಯಗಳ ಎಲ್ಲಾ ಭಾಗಗಳು, ಔಷಧೀಯ ಬಳಕೆಯನ್ನು ಹೊಂದಿವೆ ಎಂದು ವರದಿಯಾಗಿದೆ. ಇದನ್ನು ಸುಟ್ಟು ಬೂದಿಮಾಡಿ ಅಥವಾ ಯಾವುದೇ ಇತರ ರೂಪಗಳಲ್ಲಿ ಔಷಧವಾಗಿ ಇದನ್ನು ಬಳಸಲಾಗುತ್ತದೆ ಎ೦ದೂ ತಿಳಿದುಬ೦ದಿದೆ.
ಕೊಳವಳಿಕೆ ಗಿಡ:


ಕಾಡು ಲವ೦ಗ: ಇದರ ವೈಜ್ಞಾನಿಕ ಹೆಸರು ಲುಡ್ವಿಜಿಯಾ ಆಕ್ಟೋವಲ್ವಿಸ್ (Ludwigia octovalvis), ಇದು ಒನಾಗ್ರೇಸಿಯೆ (Onagraceae) ಕುಟುಂಬಕ್ಕೆ ಸೇರಿದೆ. ಸಸ್ಯವನ್ನು ಸಾಮಾನ್ಯವಾಗಿ ವಿಲೋ ಪ್ರೈಮ್ರೋಸ್ ಎಂದು ಕರೆಯಲಾಗುತ್ತದೆ. ಸಸ್ಯಗಳು ಕಾ೦ಡದ ಪ್ರತಿ ಗ೦ಟುಗಳಲ್ಲಿ ಬೇರುಬಿಡುವ೦ತವುಗಳಾಗಿದ್ದು, ನೆಲ ಅಥವ ನೀರಿನಲ್ಲಿ ಸುಲಲಿತವಾಗಿ ಬೆಳೆಯುತ್ತವೆ. ಸಸ್ಯವು ನಾಲ್ಕು ದಳಗಳಿ೦ದ ಕೂಡಿದ ಹಳದಿ ಹೂವುಗಳನ್ನು ಬಿಡುತ್ತದೆ. ಇವುಗಳ ಕೆಲವು ಔಷದೀಯ ಗುಣಗಳ ಬಗ್ಗೆಯೂ ಉಲ್ಲೇಖಗಳಿವೆ.
ಕಾಡು ಲವ೦ಗ:




ಹತ್ತಿ ಎಲೆ ಹರಳು, ಇದು ಜಟ್ರೋಫಾ ಗಾಸಿಪಿಫೋಲಿಯಾ (Jatropha gossypifolia), ಎ೦ದು ವೈಜ್ಞಾನಿಕವಾಗಿ ಕರೆಯಲ್ಪಡುವ, ಯುಫೋರ್ಬಿಯೇಸಿಯೆ (Euphorbiaceae) ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದನ್ನು ಸಾಮಾನ್ಯವಾಗಿ ಫಿಸಿಕ್‌ನಟ್ ಎಂದು ಕರೆಯಲಾಗುತ್ತದೆ. ಇದರ ಎಲೆಗಳು ಮೊದಮೊದಲು ನೇರಳೆ ಬಣ್ಣದ್ದವಾಗಿದ್ದು ನ೦ತರ ಹಸಿರು ಬಣ್ಣಕ್ಕೆ ತಿರುಗುತ್ತವೆ. ಮಧ್ಯಭಾಗಲ್ಲಿ ಹಳದಿ ಬಣ್ಣದಿ೦ದ ಕೂಡಿದ ಸಣ್ಣ ಕೆಂಪು ಹೂವುಗಳು ಗೊಂಚಲುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಸಸ್ಯಗಳು ಪಶುವೈದ್ಯಕೀಯ ಮತ್ತು ಸಾಂಪ್ರದಾಯಿಕ ಔಷಧೀಯ ಬಳಕೆಯನ್ನು ಹೊಂದಿವೆ ಎಂದು ವರದಿಯಾಗಿದೆ. ಇದೇ ಸಸ್ಯ ಕುಟು೦ಬಕ್ಕೆ ಸೇರಿದ Jatropha curcas ಎ೦ಬ ಇನ್ನೊ೦ದು ಪ್ರಭೇದವು, ಜೈವಿಕ ಇ೦ದನ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಹತ್ತಿ ಎಲೆ ಹರಳು:


ಪುಂಡಿ ಪಲ್ಯ / ಪುಂಡಿ ಸೊಪ್ಪು: ಈ ಸಸ್ಯ ವೈಜ್ಞಾನಿಕವಾಗಿ ಹೈಬಿಸ್ಕಸ್ ಸಬ್ಡಾರಿಫಾ (Hibiscus sabdariffa) ಎಂದು ಕರೆಯಲ್ಪಡುತ್ತದೆ, ಇದು ಮಾಲ್ವೇಸಿಯೇ (Malvaceae) ಕುಟುಂಬಕ್ಕೆ ಸೇರಿದೆ. ಸಸ್ಯಗಳು ವಾರ್ಷಿಕ ಅಥವಾ ದ್ವೈವಾರ್ಷಿಕವಾಗಿವೆ. ಹೂವುಗಳು 8 ರಿಂದ 10 ಸೆಂ.ಮೀ ಗಾತ್ರದವುಗಳಾಗಿದ್ದು, ಮೊದಮೊದಲು ಬಿಳಿ ಅಥವ ತಿಳಿ ಹಳದಿ ಬಣ್ಣದಲ್ಲಿರುತ್ತವೆ, ಹಣ್ಣುಗಳು ಬಲಿತಂತೆ ಅವು ಕಡುಗೆಂಪು ಬಣ್ಣಕ್ಕೆ ತಿರುಗುತ್ತವೆ. ಹಣ್ಣುಗಳು ಮಾಗಲು ಸುಮಾರು ಆರು ತಿಂಗಳು ತೆಗೆದುಕೊಳ್ಳುತ್ತದೆ. ಈವುಗಳ ಬಹು ಮುಖ್ಯ ಉಪಯೋಗವೆ೦ದರೆ ನಾರುಗಳ (Fibre) ಉತ್ಪಾದನೆ. ಇದನ್ನು ಹಗ್ಗಗಳು, ಸೆಣಬಿನ ಚೀಲಗಳು ಮತ್ತು ಕರಕುಶಲ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಭಾರತದ ವಿವಿಧ ಭಾಗಗಳಲ್ಲಿ ಹೂವು ಮತ್ತು ಯೆಲೆಗಳನ್ನು ತರಕಾರಿಗಳಾಗಿ ಬಳಸಲಾಗುತ್ತದೆ.
ಪುಂಡಿ ಪಲ್ಯ / ಪುಂಡಿ ಸೊಪ್ಪು:




ಮೆಸೊಸ್ಫೇರಮ್ ಸುವಾವೊಲೆನ್ಸ್ (Mesosphaerum suaveolens) ಎನ್ನುವ ವೈಜ್ಞಾನಿಕ ಹೆಸರಿನ ಈ ಸಸ್ಯವನ್ನು ಸಾಮಾನ್ಯವಾಗಿ ಅಮೆರಿಕನ್ ಮಿ೦ಟ್ ಎಂದು ಕರೆಯಲಾಗುತ್ತದೆ. ಇದು 1 ರಿಂದ 3 ಮೀ ಎತ್ತರದವರೆಗೆ ಬೆಳೆಯುವ ಸಸ್ಯವಾಗಿದೆ. ಇದು ಲ್ಯಾಮಿಯೇಸೀಯೇ ಕುಟುಂಬಕ್ಕೆ ಸೇರಿದೆ. ಎಲೆಗಳನ್ನು ಜಜ್ಜಿದಾಗ ಪುದಿನದ ಎಲೆಗಳ ವಾಸನೆಯನ್ನು ಹೊರಸೂಸುತ್ತವೆ ಹೂವುಗಳು ಗುಲಾಬಿ ಅಥವಾ ನೇರಳೆ ಬಣ್ಣದಲ್ಲಿರುತ್ತವೆ ಮತ್ತು ಗೊಂಚಲುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಸಸ್ಯಗಳು ಕೀಟನಾಶಕ ಗುಣಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಕೆಲವು ಭಾಗಗಳಲ್ಲಿ, ಸಸ್ಯಗಳ ಬೀಜಗಳನ್ನು ಪಾನೀಯಗಳನ್ನು ತಯಾರಿಸಲು ಬಳಸಲಾಗುತ್ತದೆ ಎ೦ದು ತಿಳಿಯಲಾಗಿದೆ.
ಗ೦ಗಾ ತುಳಸಿ ಅಥವ ಕಾಡು ತುಳಸಿ:




ಸೋನಾಮುಖಿ ಗಿಡ : ಸೆನ್ನಾ ಬೈಕಾಸ್ಪುಲಾರಿಸ್ (Senna bicaspularis), ಎ೦ದು ಕರೆಯಲ್ಪ್ಡುವ ಈ ಸಸ್ಯವು, ಫ್ಯಾಬೇಸಿಯೆ (Fabaceae) ಕುಟುಂಬಕ್ಕೆ ಸೇರಿದೆ. ಇದನ್ನು ರಾಂಬ್ಲಿಂಗ್ ಸೆನ್ನಾ ಅಥವಾ ವಿಂಟರ್ ಕ್ಯಾಸಿಯಾ ಅಥವಾ ಕ್ರಿಸ್ಮಸ್ ಬುಷ್ ಎಂದು ಕರೆಯಲಾಗುತ್ತದೆ. ಚಳಿಗಾಲದ ಅವಧಿಯಲ್ಲಿ ಸಸ್ಯವು ಗು೦ಪುಗು೦ಪಾಗಿ ಹಳದಿ ಹೂವುಗಳನ್ನು ಅರಳಿಸುತ್ತವೆ. . ಪ್ರಪಂಚದ ಹಲವಾರು ಭಾಗಗಳಲ್ಲಿ ಇದನ್ನು ಆಕ್ರಮಣಕಾರಿ ಕಳೆ ಎಂದು ಪರಿಗಣಿಸಲಾಗುತ್ತದೆ. ಇದರ ಎಲೆಗಳನ್ನು ಆಹಾರವಾಗಿ ಮತ್ತು ಔಷಧಿ ಗುಣಗಳಿಗಾಗಿ ಉಪಯೋಗಿಸುವ ಬಗ್ಗೆ ಉಲ್ಲೇಖಗಳಿವೆ.
ಸೋನಾಮುಖಿ ಗಿಡ




ವಿಷ್ಣುಕಾಂತಿ ಗಿಡ, ಎವೊಲ್ವುಲಸ್ ಅಲ್ಸಿನಾಯ್ಡ್ಸ್, ( Evolvulus alsinoides) ಎನ್ನುವ ವೈಜ್ಞಾನಿಕ ಹೆಸರು ಇರುವ ಇದು ಕಾನ್ವೊಲ್ವುಲೇಸಿಯೆ (Convolvulaceae) ಕುಟುಂಬಕ್ಕೆ ಸೇರಿದೆ. ಈ ಸಸ್ಯವು ವಾರ್ಷಿಕ ಅಥವಾ ಬಹುವಾರ್ಷಿಕವಾಗಿದ್ದು, ಜವುಗು ಪ್ರದೇಶದಲ್ಲಿ, ನೆಲದ ಮೇಲೆ ಹರಡಿಕೊ೦ಡು ಬೆಳೆಯುತ್ತವೆ. ಸಸ್ಯಗಳ ಎಲೆಗಳು ಮತ್ತು ಕಾ೦ಡ ಚಿಕ್ಕ ಚಿಕ್ಕ ಕೂದಲುಗಳಿ೦ದ ಆವರಿಸಲ್ಪಟ್ಟಿರುತ್ತವೆ. ಹೂವುಗಳು ಪ್ರತ್ಯೇಕ ಅಥವಾ ಗು೦ಪುಗು೦ಪಾಗಿರುತ್ತವೆ ಮತ್ತು ನೇರಳೆ ಬಣ್ಣವನ್ನು ಹೊಂದಿರುತ್ತದೆ. ಇದು ಕೇರಳದ ಹತ್ತು ಪವಿತ್ರ ಹೂವುಗಳಾದ 'ದಸಪುಷ್ಪಂ' ಗಳಲ್ಲಿ ಒಂದಾಗಿದೆ ಎನ್ನುವ ಉಲ್ಲೇಖವಿದೆ. ಇದನ್ನು ಒ೦ದು ಮುಖ್ಯ ಔಷಧೀಯ ಸಸ್ಯ ಎ೦ದು ಪರಿಗಣಿಸಲಾಗಿದೆ.
ವಿಷ್ಣುಕಾಂತಿ ಗಿಡ:
ಒಟ್ಟಾರೆಯಾಗಿ, ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಸಸ್ಯಗಳ ಇರುವಿಕೆ ಪ್ರಾಕ್ರತಿಕ ಸಮತೋಲನ ಮತ್ತು ಜೀವವೈವಿದ್ಯತೆಗೆ ಕಾರಣವಾಗುತ್ತವೆ. ಇವುಗಳಿ೦ದ ನಾವು ಉಸಿರಾಡುವ ಗಾಳಿ ಮತ್ತು ಇರುವ ಪರಿಸರ ಸ್ವಲ್ಪವೇ ಮಲಿನ ಮುಕ್ತಗೊ೦ಡರೂ ಅದಕ್ಕಿ೦ತ ಹೆಚ್ಚಿನದೇನು ಬೇಕು.