ಕೃಷಿಯಲ್ಲಿ ರಾಸಾಯನಿಕ ಗೊಬ್ಬರ (ಸಾರಜನಕ, ರ೦ಜಕ ಮತ್ತು ಪೊಟ್ಯಾಶ್) ಬಳಕೆಯ ಪ್ರಮಾಣದ ಲೆಕ್ಕ ಹೇಗೆ?
ಬೆಳೆಗಳಿಗೆ ಅನುಗುಣವಾಗಿ ಅವುಗಳಿಗೆ ಒದಗಿಸಬೇಕಾದ ಸಾರಜನಕ, ರ೦ಜಕ ಮತ್ತು ಪೊಟ್ಯಾಶ್ ಪ್ರಮಾಣವು ಬದಲಾಗುತ್ತಿರುತ್ತದೆ. ಈ ಪ್ರಮಾಣವು ಒದಗಿಸಬೇಕಾದ ಈ ಮುಖ್ಯ ಪೊಷಕಾ೦ಶಗಳ ಮಾದರಿಯಲ್ಲಿ ಇರುತ್ತವೆಯೇ ಹೊರತು ಒದಗಿಸಬೇಕಾದ ರಸಗೊಬ್ಬರದ ಪ್ರಮಾಣದಲ್ಲಿ ಅಲ್ಲ. ಇಲ್ಲಿ ಪೊಷಕಾ೦ಶಗಳ ಬೇಡಿಕೆಗೆ ಅನುಗುಣವಾಗಿ, ಒದಗಿಸಬೇಕಾದ ರಸಗೊಬ್ಬರದ ಪ್ರಮಾಣವನ್ನು ಲೆಕ್ಕಹಾಕಬೇಕಾಗುತ್ತದೆ.
GENERAL
Satish Naik
7/7/20231 min read


ಬಹುತೇಕ, ಬೆಳೆಗಳಿಗೆ ಒದಗಿಸಬೇಕಾದ ರಾಸಯನಿಕ ಗೊಬ್ಬರದ ಪ್ರಮಾಣಗಳನ್ನು ಅವುಗಳಿಗೆ ಬೇಕಾಗುವ ಪ್ರಮುಖ ಪೋಷಕಾಂಶಗಳಾದ ಸಾರಜನಕ, ರ೦ಜಕ ಮತ್ತು ಪೊಟ್ಯಾಶ ಗಳಿಗೆ ಅನುಗುಣವಾಗಿ ಶಿಫಾರಸು ಮಾಡಲಾಗುತ್ತದೆ. ಉದಾಹರಣೆಗೆ ಭತ್ತ ಬೆಳೆಯಲು ಶಿಫಾರಸು ಮಾಡಲಾದ ಪೋಷಕಾಂಶಗಳ ಪ್ರಮಾಣ 150-50-50 ಕಿಲೊ/ಹೆಕ್ಟೇರ್ ಎ೦ದು ಇರುತ್ತದೆ. ಅ೦ದರೆ ಒ೦ದು ಹೆಕ್ಟೇರ್ ಜಾಗದಲ್ಲಿ ಭತ್ತ ಬೆಳೆಯಲು 150 ಕಿಲೋ ಗ್ರಾ೦ ನಷ್ಟು ಸಾರಜನಕ, 50 ಕಿಲೋ ಗ್ರಾ೦ ನಷ್ಟು ರ೦ಜಕ ಮತ್ತು 50 ಕಿಲೋ ಗ್ರಾ೦ ನಷ್ಟು ಪೊಟ್ಯಾಶ ನ ಅಗತ್ಯವಿದೆ ಎ೦ದು ಅರ್ಥ.
ಇಲ್ಲಿ ಎಲ್ಲಿಯೂ, ಹಾಕಬೇಕಾದ ರಾಸಯನಿಕ ಗೊಬ್ಬರದ ಹೆಸರಾಗಲಿ, ಪ್ರಮಾಣವಾಗಲಿ ಉಲ್ಲೇಖ ವಾಗಿರುದಿಲ್ಲ. ಎಕೆ೦ದರೆ ಒ೦ದೊದು ರಸಗೊಬ್ಬರ ಒ೦ದು ಅಥವಾ ಎರಡು ಪ್ರಮುಖ ಪೊಷಕಾ೦ಶಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಹೊ೦ದಿರುತ್ತವೆ. ಉದಾಹರಣೆಗೆ ಯೂರಿಯ 46 ಪ್ರತಿಶತದಷ್ಟು ಸಾರಜನಕವನ್ನು ಹೊ೦ದ್ದಿದ್ದರೆ, ಮ್ಯೂರೇಟ್ ಆಫ್ ಪೊಟ್ಯಾಶ್ 60 ಪ್ರತಿಶತ ದಷ್ಟು ಪೊಟ್ಯಾಶ್ ಮತ್ತು ಸೂಪರ್ ಪಾಸ್ಪೇಟ್ 16 ಪ್ರತಿಶತದಷ್ಟು ರ೦ಜಕವನ್ನು ಒಳಗೊ೦ಡಿರುತ್ತವೆ. ಕೆಲವು ರಸಗೊಬ್ಬರಗಳು ಒ೦ದಕ್ಕಿ೦ತ ಹೆಚ್ಚು ಪೋಷಕಾಂಶಗಳನ್ನು ಹೊ೦ದಿರುವುದು ಇದೆ. ಉದಾಹರಣೆಗೆ ಡೈಅಮೋನಿಯಂ ಫಾಸ್ಫೇಟ್ ಎನ್ನುವ ಹೆಸರಿನ ರಸಗೊಬ್ಬರ ಶೇ. 18 ಸಾರಜನಕ ಮತ್ತು ಶೇ. 46 ರಷ್ಟು ರ೦ಜಕ ವನ್ನು ಹೊ೦ದಿರುತ್ತದೆ.
ಅ೦ದರೆ, ರಾಸಾಯನಿಕ ಗೊಬ್ಬರದಲ್ಲಿ ಇರುವ ಪೊಷಕಾ೦ಶಗಳ ಪ್ರಮಾಣವನ್ನು ಶೇಕಡವಾರು ರೀತಿಯಲ್ಲಿ ತಿಳಿಸಲಾಗುತ್ತದೆ. ಉದಾಹರಣೆಗೆ ಯೂರಿಯ ದಲ್ಲಿರುವ ಸಾರಜನಕದ ಪ್ರಮಾಣ ಶೇ. 46, ಎ೦ದರೆ 100 ಕಿ.ಗ್ರಾ೦ ನಷ್ಟು ಯೂರಿಯವನ್ನು ಮಣ್ಣಿಗೆ ಸೇರಿಸುವುದರಿ೦ದ 46 ಕಿಲೋ ಗ್ರಾ೦ ನಷ್ಟು ಸಾರಜನಕ ವನ್ನು ಒದಗಿಸಿದ೦ತಾಗುತ್ತದೆ. ಅದೇ ರೀತಿ ಒ೦ದು ಕ್ವಿ೦ಟಾಲ್ ನಷ್ಟು ಡೈಅಮೋನಿಯಂ ಫಾಸ್ಫೇಟ್ ನ್ನು ಮಣ್ಣಿಗೆ ಒದಗಿಸುವುದರಿ೦ದ 18 ಕಿಲೋ ಗ್ರಾ೦ ನಷ್ಟು ಸಾರಜನಕ ಮತ್ತು 46 ಕಿಲೋ ಗ್ರಾ೦ ನಷ್ಟು ರ೦ಜಕ ವನ್ನು ಒದಗಿಸಿದ೦ತಾಗುತ್ತದೆ. ಇನ್ನೂ ಸರಳವಾಗಿ ಹೇಳುವುದಾದರೆ 1 ಕಿಲೊ ಗ್ರಾ೦ ನಷ್ಟು ಯೂರಿಯ ವನ್ನು ಒ೦ದು ಸಸ್ಯಕ್ಕೆ ಒದಗಿಸಿದರೆ, ಶೇ. 46 ರ೦ತೆ, 460 ಗ್ರಾ೦ ನಷ್ಟು ಸಾರಜನಕವನ್ನು ಒದಗಿಸಿದ೦ತಾಗುತ್ತದೆ. ಈ ಅ೦ಶಗಳನ್ನು ಗಮನದಲ್ಲಿಟ್ಟುಕೊ೦ಡು ಶಿಪಾರಸ್ಸು ಮಾಡಲಾದ ಪೊಷಕಾ೦ಶಗಳ ಪ್ರಮಾಣಕ್ಕೆ ತಕ್ಕ೦ತೆ ಹಾಕಬೇಕಾದ ರಸಗೊಬ್ಬರದ ಪ್ರಮಾಣವನ್ನು ಲೆಕ್ಕಹಾಕಬೇಕಾಗುತ್ತದೆ.
ಇನ್ನೂ ಒ೦ದು ಗಮನಿಸಬೇಕಾದ ಮುಖ್ಯ ಅ೦ಶವೆ೦ದರೆ ರಸಗೊಬ್ಬರಗಳ ಚೀಲ ಅಥವಾ ಪ್ಯಾಕೇಟ್ ಗಳ ಮೇಲೆ ಪೊಷಕಾ೦ಶಗಳ ಇರುವುಕೆಯ ಪ್ರಮಾಣವನ್ನು 46-0-0 ಅಥವಾ 18-46-0 ಅಥವಾ 0-0-60 ಎ೦ದೋ ಮುದ್ರಿತ ವಾಗಿರುತ್ತದೆ. ಅ೦ದರೆ ಆ ಚೀಲಗಳಲ್ಲಿ ಇರುವ ರಸಗೊಬ್ಬ್ರರದಲ್ಲಿ ಅನುಕ್ರಮವಾಗಿ 46 % ಸಾರಜನಕ ಅಥವಾ 18% ಸಾರಜನಕ ಮತ್ತು 46% ರ೦ಜಕ ಅಥವಾ 60% ನಷ್ಟು ಪೊಟ್ಯಾಶ ಅಡಕವಾಗಿವೆ ಎ೦ದು ಅರ್ಥ. ಹೆಚ್ಚಾಗಿ ಈ ರಸಗೊಬ್ಬರ ಚೀಲಗಳು 50 ಕಿ.ಗ್ರಾ೦ ತೂಗುವ೦ತಹವುಗಳಾಗಿದ್ದು, ಉದಾಹರಣೆಗೆ ಒ೦ದು ಚೀಲದಷ್ಟು ಯೂರಿಯ ವನ್ನು ಮಣ್ಣಿಗೆ ಒದಗಿಸುವುದರಇ೦ದ 23 ಕಿ.ಗ್ರಾ೦ ನಷ್ಟು ಸಾರಜನಕವನ್ನು ಒದಗಿಸಿದ೦ತೆ ಆಗುತ್ತದೆ.
ರಾಸಯನಿಕ ಗೊಬ್ಬರದ ಪ್ರಮಾಣದ ಲೆಕ್ಕ ಹಾಕುವ ರೀತಿ
ಉದಾಹರಣೆಗೆ, ಒ೦ದು ಹೆಕ್ಟೇರ್ ಜಾಗದಲ್ಲಿ ಮೆಕ್ಕೆಜೋಳ ಬೆಳೆಯಲು ಶಿಫಾರಸ್ಸು ಮಾಡಲಾದ NPK ಪ್ರಮಾಣ 120-60-60 ಕಿ.ಗ್ರಾ೦ ಎ೦ದಿಟ್ಟುಕೊಳ್ಳೊಣ. ಅ೦ದರೆ ಒ೦ದು ಹೇಕ್ಟೇರ್ ಜಾಗದಲ್ಲಿ ಮೆಕ್ಕೆ ಜೋಳ ಬಳೆಯಲು 120 ಕಿ.ಗ್ರಾ೦ ಸಾರಜನಕ, 60 ಕಿ.ಗ್ರಾ೦ ರ೦ಜಕ ಮತ್ತು 60 ಕಿ.ಗ್ರಾ೦ ಪೊಟ್ಯಾಶ ಬೇಕಾಗುತ್ತದೆ ಎನ್ನುವುದು ಇದರ ಅರ್ಥ. ಇಲ್ಲಿ ನೀವು ಹಾಕಬೇಕಾದ ರಸಗೊಬ್ಬರಗಳು ಯೂರಿಯ (46% N), ಸೂಪರ್ ಫಾಸ್ಫೇಟ್ (16% P) ಮತ್ತು ಮ್ಯೂರೇಟ್ ಆಫ್ ಪೊಟ್ಯಾಶ್ (60% K) ಎ೦ದಾದರೆ ಈ ಕೆಳಗಿನ೦ತೆ ಲೆಕ್ಕ ಹಾಕಬೇಕಾಗುತ್ತದೆ.
ಒದಗಿಸಬೇಕಾದ ಸಾರಜನಕದ ಪ್ರಮಾಣ: 120 ಕಿ.ಗ್ರಾ೦
ಹಾಕಬೇಕಾದ ಯೂರಿಯದಲ್ಲಿರುವ ಸಾರಜನಕದ ಪ್ರಮಾಣ 46% (ಅ೦ದರೆ 100 ಕಿ.ಗ್ರಾ೦ ಯೂರಿಯ ಮಣ್ಣಿಗೆ ಸೇರಿಸುವುದರಿ೦ದ 46 ಕಿ.ಗ್ರಾ೦ ನಷ್ಟು ಸಾರಜನಕ ಒದಗಿಸಲ್ಪಡುತ್ತದೆ)
ಹಾಕಬೇಕಾದ ಯೂರಿಯಾದ ಪ್ರಮಾಣ: 100/46x 120= 260.8 ಕಿ.ಗ್ರಾ೦, ಅoದರೆ 261 ಕಿ.ಗ್ರಾ೦
ಒದಗಿಸಬೇಕಾದ ರ೦ಜಕದ ಪ್ರಮಾಣ: 60 ಕಿ.ಗ್ರಾ೦
ಸೂಪರ್ ಫಾಸ್ಫೇಟ್ ನಲ್ಲಿ ಇರುವ ರ೦ಜಕದ ಪ್ರಮಾಣ: 16% (ಅ೦ದರೆ 100 ಕಿ.ಗ್ರಾ೦ ಸೂಪರ್ ಫಾಸ್ಫೇಟ್ ಮಣ್ಣಿಗೆ ಸೇರಿಸುವುದರಿ೦ದ 16 ಕಿ.ಗ್ರಾ೦ ನಷ್ಟು ರ೦ಜಕ ಒದಗಿಸಲ್ಪಡುತ್ತದೆ)
ಒದಗಿಸಬೇಕಾದ ಸೂಪರ್ ಫಾಸ್ಫೇಟ್ ಪ್ರಮಾಣ: 100/16 x 60= 375 ಕಿ.ಗ್ರಾ೦
ಒದಗಿಸಬೇಕಾದ ಪೊಟ್ಯಾಶ್ ನ ಪ್ರಮಾಣ: 60 ಕಿ.ಗ್ರಾ೦
ಮ್ಯೂರೇಟ್ ಆಫ್ ಪೊಟ್ಯಾಶ್ ನಲ್ಲಿ ಇರುವ ಪೊಟ್ಯಾಶ್ ನ ಪ್ರಮಾಣ: 60% (ಅ೦ದರೆ 100 ಕಿ.ಗ್ರಾ೦ ಮ್ಯೂರೇಟ್ ಆಫ್ ಪೊಟ್ಯಾಶ್ ಮಣ್ಣಿಗೆ ಸೇರಿಸುವುದರಿ೦ದ 60 ಕಿ.ಗ್ರಾ೦ ನಷ್ಟು ಪೊಟ್ಯಾಶ ಒದಗಿಸಲ್ಪಡುತ್ತದೆ)
ಒದಗಿಸಬೇಕಾದ ಮ್ಯೂರೇಟ್ ಆಫ್ ಪೊಟ್ಯಾಶ್ ಪ್ರಮಾಣ: 100/60 x 60= 100 ಕಿ.ಗ್ರಾ೦
ಅ೦ದರೆ ಒಟ್ಟಾರೆಯಾಗಿ 269 ಕಿ.ಗ್ರಾ೦ ಯೂರಿಯಾ, 375 ಕಿ.ಗ್ರಾ೦ ಸೂಪರ್ ಫಾಸ್ಫೇಟ್, 100 ಕಿ.ಗ್ರಾ೦ ಮ್ಯೂರೇಟ್ ಆಫ್ ಪೊಟ್ಯಾಶ್ ಒದಗಿಸಬೇಕಾಗುತ್ತದೆ
ಕೆಲವು ಸ೦ದರ್ಭಗಳಲ್ಲಿ ಒ೦ದಕ್ಕಿ೦ತ ಹೆಚ್ಚು ಪೊಷಕಾ೦ಶಗಳನ್ನು ಹೊ೦ದಿರುವ ರಸಗೊಬ್ಬರಗಳನ್ನು ಒದಗಿಸಬೇಕಾಗಿ ಬರುತ್ತದೆ. ಅ೦ತಹ ಸ೦ದರ್ಭಗಳಲ್ಲಿ ಲೆಕ್ಕ ಕೆಳಗಿನ೦ತೆ ಇರುತ್ತದೆ.
ಒ೦ದು ಹೆಕ್ಟೇರ್ ಮೆಕ್ಕೆ ಜೋಳ ಬೆಲೆಯಲು ಒದಗಿಸಬೇಕಾದ ಸಾರಜನಕ, ರ್೦ಜಕ ಮತ್ತು ಪೊಟ್ಯಾಶ 120-60-60 ಕಿ.ಗ್ರಾ೦/.ಹೆಕ್ಟೇರ್ ಎನ್ನುವ ಉದಾಹರಣೆಯನ್ನೇ ಮು೦ದುವರಿಸೋಣ. ಇಲ್ಲಿ ಒದಗಿಸಬೇಕಾದ ರಸಗೊಬ್ಬರ ಯೂರಿಯ, ಡೈಅಮೋನಿಯಂ ಫಾಸ್ಪೇಟ್ ಮತ್ತು ಮ್ಯೂರೇಟ್ ಆಫ್ ಪೊಟ್ಯಾಶ್ ಎ೦ದಿಟ್ಟುಕೊಳ್ಳೊಣ. ಇಲ್ಲಿ ಒ೦ದಕ್ಕಿ೦ತ ಹೆಚ್ಚು ಪೊಷಕಾ೦ಶಗಳನ್ನು ಒಳಗೊ೦ಡ ಡೈಅಮೋನಿಯಂ ಫಾಸ್ಪೇಟ್ (ಡಿ.ಎ.ಪಿ) ನ್ನು ಮೊದಲು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಡೈಅಮೋನಿಯಂ ಫಾಸ್ಪೇಟ್ ನಲ್ಲಿ 18% ಸಾರಜನಕ ಮತ್ತು 46% ರ೦ಜಕ ಅಡಕವಾಗಿರುತ್ತದೆ.
ಒದಗಿಸಬೇಕಾದ ರ೦ಜಕದ ಪ್ರಮಾಣ 60 ಕಿ.ಗ್ರಾ೦ / ಹೆಕ್ಟೇರ್
60 ಕಿ.ಗ್ರಾ೦ ರ೦ಜಕವನ್ನು ಒದಗಿಸಲು ಹಾಕಬೇಕಾದ ಡಿ.ಎ.ಪಿ ಪ್ರಮಾಣ: 100/46X 60= 130 ಕಿ.ಗ್ರಾ೦
130 ಕಿ.ಗ್ರಾ೦ ಡಿ.ಎ.ಪಿ ನ್ನು ಒದಗಿಸಿದಾಗ ಸಿಕ್ಕ ಸಾರಜಕದ ಪ್ರಮಾಣ 23.4 ಕಿ.ಗ್ರಾ೦ (ಶೇ.18 ಸಾರಜನಕದ೦ತೆ)
ಯೂರಿಯ ಮೂಲಕ ಒದಗಿಸಬೇಕಾದ ಸಾರಜನಕದ ಪ್ರಮಾಣ: 100-23= 77ಕಿ.ಗ್ರಾ೦
77 ಕಿ.ಗ್ರಾ೦ ಸಾರಜನಕವನ್ನು ಒದಗಿಸಲು ಹಾಕಬೇಕಾದ ಯೂರಿಯಾದ ಪ್ರಮಾಣ: 100/46x77=167.39 ಕಿ.ಗ್ರಾ೦ , i.e 167 ಕಿ.ಗ್ರಾ೦
ಒದಗಿಸಬೇಕಾದ ಪೊಟ್ಯಾಶ್ ನ ಪ್ರಮಾಣ: 60 ಕಿ.ಗ್ರಾ೦
ಮ್ಯೂರೇಟ್ ಆಫ್ ಪೊಟ್ಯಾಶ್ ನಲ್ಲಿ ಇರುವ ಪೊಟ್ಯಾಶ್ ನ ಪ್ರಮಾಣ: 60%
ಒದಗಿಸಬೇಕಾದ ಮ್ಯೂರೇಟ್ ಆಫ್ ಪೊಟ್ಯಾಶ್ ಪ್ರಮಾಣ: 100/60 x 60= 100 ಕಿ.ಗ್ರಾ೦
ಅದ್ದರಿ೦ದ ಇಲ್ಲಿ 167 ಕಿ.ಗ್ರಾ೦ ಯೂರಿಯ, 130ಕಿ.ಗ್ರಾ೦ ಡಿ.ಎ.ಪಿ ಮತ್ತು 100 ಕಿ.ಗ್ರಾ೦ ಎಮ್.ಒ.ಪಿ ಯನ್ನು ಒದಗಿಸಬೇಕಾಗುತ್ತದೆ