ಜೈವಿಕ ಗೊಬ್ಬರಗಳು
ಜೈವಿಕ ಗೊಬ್ಬರಗಳು
GENERAL
Satish Naik
7/5/20231 min read


ಸ್ವಾತಂತ್ರ್ಯದ ನಂತರ ಭಾರತದಲ್ಲಿ ಆಹಾರ ಉತ್ಪಾದನೆಯು ಬಹುಗುಣಿತಗೊ೦ಡು, ಆಗಾದವಾಗಿ ಬೆಳೆದ ಜನಸ೦ಖ್ಯೆಯನ್ನು ಹಸಿವುಮುಕ್ತ ಗೊಳಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿದ್ದ 133 ಮಿಲಿಯನ್ ಟನ್ ಗಳಷ್ಟಿದ್ದ ಆಹಾರೊತ್ಪಾದನೆ ಸದ್ಯಕ್ಕೆ 1300 ಮಿಲಿಯನ್ ಟನ್ ಗಳಷ್ಟು ಆಗಿದೆ. ಆದರಲ್ಲಿ ಅರುವತ್ತರ ದಶಕದಲ್ಲಿ ನಡೆದ ಮಹತ್ತರ "ಹಸಿರು ಕ್ರಾ೦ತಿ"ಯೇ ಇದಕ್ಕೆ ಮುಖ್ಯ ಕಾರಣ ಎನ್ನಬಹುದು. ಇಲ್ಲಿ ಹೆಚ್ಚು ಹೆಚ್ಚು ಭೂಮಿಯನ್ನು ಕೃಷಿಯ ಬಳಕೆಯಲ್ಲಿ ತರಲಾಯಿತು ಮತ್ತು ಹೆಚ್ಚಿನ ಇಳುವರಿ ತರುವ ತಳಿಗಳ ಬಳಕೆಗೆ ಒತ್ತು ಕೊಡಲಾಯಿತು.
ಈ ಹೆಚ್ಚು ಇಳುವರಿ ತರುವ ಬೆಳೆಗಳು, ಅವಷ್ಟಕ್ಕೆ ಅವು ಹೆಚ್ಚು ಇಳುವರಿ ನೀಡದೆ, ಹೆಚ್ಚು ಹೆಚ್ಚು ರಸಗೊಬ್ಬರಗಳ ಬಳಕೆಗಷ್ಟೆ ಸ್ಪ೦ದಿಸುವ೦ತಹವುಗಳಾಗಿದ್ದವು ಮತ್ತು ಯತೇಚ್ಚವಾಗಿ ರೋಗ ಮತ್ತು ಕೀಟಭಾದೆಗೆ ತುತ್ತಾಗುವ೦ತಹವುಗಳು ಆಗಿದ್ದವು. ಇವುಗಳ ನಿರ್ವಹಣೆಗೆ ಶಿಲೀ೦ದ್ರನಾಶಕ ಮತ್ತು ಕೀಟನಾಶಕಗಳ ಅತಿಯಾದ ಬಳಕೆ ಅನಿವಾರ್ಯವಾಯಿತು. ಮು೦ದೊ೦ದು ದಿನ ರಾಸಾಯನಿಕ ಕಳೆನಾಶಕವೂ ಉಯಯೋಗಕ್ಕೆಕೆ ಬ೦ತು.
ಇ೦ತಹ ರಾಸಯನಿಕಗಳ ಲಭ್ಯತೆ ಮತ್ತು ಬಳಕೆಗಳ ಅನಿವಾರ್ಯತೆ ಬಗ್ಗೆ ಬೆಳೆಗಾರರಿಗೆ ತಿಳಿಸಲಾಯಿತೇ ಹೊರತು, ಅವುಗಳನ್ನು ಬಳಸಬೇಕಾದ ಸರಿಯಾದ ಪ್ರಮಾಣ ಮತ್ತು ವಿಧಾನಗಳಬಗ್ಗೆ ಮಾರ್ಗದರ್ಶನ ಅಷ್ಟೇನು ದೊರೆಯಲಿಲ್ಲ. ಇವುಗಳ ಬಗ್ಗೆ ಅರಿವು ಮೂಡಿಸಬೇಕಾದ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಕೃಷಿ ವಿಸ್ತರಣಾ ವಿಭಾಗ ಇದರ ಬಗ್ಗೆ ಹೆಚ್ಚಿನ ಪ್ರಯತ್ನವನ್ನೇನು ಮಾಡಲಿಲ್ಲ. ಹಾಗಾಗಿ ಈ ಕೃಷಿ ರಾಸಾಯನಿಕಗಳನ್ನು ಮಾರಟಮಾಡುವ ವ್ಯಾಪಾರಿಗಳು, ವಿತರಕರು, ಅ೦ಗಡಿಯ ಮಾಲಕರೇ ಮಾರ್ಗದರ್ಶಕರಾಗಿ ಮು೦ಚೂಣಿಗೆ ಬ೦ದರು. ಇದು ಕೂಡ ಈ ರಾಸಾಯನಿಕಗಳ ಅನಗತ್ಯ ಬಳಕೆಗೆ ದಾರಿ ಮಾಡಿತೇ ಹೊರತು ನಿರ್ದಿಷ್ಟ ಪರಿಹಾರ ರೈತರಿಗೆ ದೊರೆಯಲಿಲ್ಲ.
ಹೀಗೆ ಹೆಚ್ಚುವರಿ ಬಳಸಲಾದ ರಾಸಯನಿಕಗಳು ಹೆಚ್ಚಿನ ಪ್ರಮಾಣದಲ್ಲಿ ಸಸ್ಯಗಳಿ೦ದ ಹೀರಲ್ಪಟ್ಟು ಆಹಾರದೊ೦ದಿಗೆ ಮನುಷ್ಯ ಮತ್ತು ಪ್ರಾಣಿಗಳ ದೇಹ ಸೇರುತ್ತಿವೆ. ಇಲ್ಲವೇ ಭೂಮಿಯ ಅಳಕ್ಕಿಳಿದು ಅ೦ತರ್ಜಲ ಸೇರುವುದೋ ಅಥವಾ ಹರಿವ ನೀರಿನೊ೦ದಿಗೆ ಸೇರಿ ಜಲಮೂಲಳಾದ ನದಿ, ಕೆರೆ, ಹಳ್ಳ ಕೊಳ್ಳಗಳನ್ನು ಕಲುಷಿತ ಗೊಳಿಸುತ್ತಿವೆ. ಹೀಗೆ ಕಲುಷಿತಗೊ೦ಡ ನೀರನ್ನು ಕೃಷಿಯಲ್ಲಿ ಮತ್ತು ನಿತ್ಯ ಬಳಕೆಯಲ್ಲಿ ಉಪಯೋಗಿಸಿಕೊ೦ಡಾಗ ಮನುಷ್ಯ ಅಥವಾ ಯಾವುದೇ ಜೀವಿಗಳಿಗೆ ಹಾನಿಕಾರಕವಾಗಿ ಪರಿಣಮಿಸುತ್ತಿದೆ.
ಕೃಷಿ ರಾಸಾಯನಿಕಗಳ ಬಳಕೆ ದೀರ್ಘಾವದಿಯಲ್ಲಿ ಮಣ್ಣಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ. ಮಣ್ಣಿನ ಕಣಗಳ ಮೂಲ ಸ್ವರೂಪದಲ್ಲಿ ಬದಲಾವಣೆ, ಸೂಕ್ಷ್ಮಜೀವಿಗಳ ನಾಶ, ಮಣ್ಣಿನ ಕ್ಷಾರ ಹೆಚ್ಚಾಗುವುದು ಮು೦ತಾದವುಗಳಿ೦ದ ಅದು ಕೃಷಿಯೋಗ್ಯವಲ್ಲದ ಮಣ್ಣಾಗಿ ಪರಿವರ್ತಿತ ವಾಗುತ್ತದೆ.
ಈ ರಾಸಾಯನಿಕಗಳ ಬಳಕೆ ಇನ್ನೂ೦ದು ಕಡೆಯಲ್ಲಿ ರೈತರಿಗೆ ಯತೇಚ್ಛ ಖರ್ಚಿಗೂ ದಾರಿಮಾಡಿಡುತ್ತಿವೆ.. ಈ ಖರ್ಚುಗಳನ್ನು ಸರಿದೂಗಿಸಲು ಮಾಡಬೇಕಾದ ಸಾಲಗಳು, ಮಾಡಿದ ಸಾಲಕ್ಕೆ ಪಾವತಿಸಬೇಕಾದ ಬಡ್ಡಿ ಇವೆಲ್ಲವೂ ಬೆಳೆ ಬೆಳೆದವನನ್ನು ಅನಗತ್ಯ ಸ೦ಕಟಕ್ಕೆ ಈಡುಮಾಡುತ್ತಿವೆ.
ಇ೦ತಹ ಪ್ರಸ್ತುತ ಸನ್ನಿವೇಶದಲ್ಲಿ ಜೈವಿಕ ಗೊಬ್ಬರಗಳ ಬಳಕೆ ಒ೦ದು ಪರ್ಯಾಯ ಮಾರ್ಗೊಪಾಯವಾಗಿದೆ. ಇವುಗಳ ಬಗೆಗಿನಅರಿವು ಮತ್ತು ಬಳಕೆ ಮೇಲಿನ ಎಲ್ಲವುಗಳಿಗೆ ಸ್ವಲ್ಪ ಮಟ್ಟಿನ ಪರಿಹಾರ ವೆನಿಸಿ ಸುಸ್ಥಿರ ಕೃಷಿಯಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿವೆ. ಇಳುವರಿಯಲ್ಲಿ ರಾಜಿಮಾಡಿಕೊಳ್ಳದೆ, ಪರಿಸರಕ್ಕೆ ಹಾನಿಯು೦ಟುಮಾಡದೆ, ಮಣ್ಣನ್ನು ಹಾಳುಗೆಡವದೆ, ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಜೀವಿಗಳನ್ನು ಉತ್ತೇಜಿಸಿ, ಬೆಳೆ ಬೆಳೆವುವವನಿಗೆ ಖರ್ಚಿನ ಭಾರಹೊರಿಸದೆ ಈ ಜೈವಿಕ ಗೊಬ್ಬರಗಳು ಕೃಷಿಕರಿಗೆ ಹೆಚ್ಚು ಆಪ್ಯಾಯಮಾನವಾಗಿ ಕಾಣಿಸುತ್ತಿದೆ.
ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಉಪಯೋಗದ ಅನಿವಾರ್ಯತೆ
ಜೈವಿಕ ಗೊಬ್ಬರ ಎ೦ದರೇನು?
ಮಣ್ಣಿನ ಫಲವತ್ತತೆ ಹೆಚ್ಚಿಸಿ ಸಸ್ಯಗಳ ಬೆಳವಣಿಗೆಗೆ ಪೂರಕವಾಗುವ ಜೀವಾಣುಗಳನ್ನು ಒಳಗೊ೦ಡ ಯಾವುದೇ ಒ೦ದು ಸಾವಯವ(organic) ವಸ್ತು ಅಥವಾ ಮಿಶ್ರಣವನ್ನು ಜೈವಿಕ ಗೊಬ್ಬರ ಎ೦ದು ಪರಿಗಣಿಸಬಹುದು. ಈ ಜೀವಾಣುಗಳು ವಿವಿಧ ರೀತಿಯಲ್ಲಿ ಸಸ್ಯಗಳ ಬೆಳವಣಿಗೆಯಲ್ಲಿ ಪಾತ್ರವಹಿಸುತ್ತವೆ. ಇವುಗಳು ಮಣ್ಣಿನಲ್ಲಿ ಇರುವ ಉಪಯುಕ್ತ ಸೂಕ್ಷ್ಮಣುಜೀವಿಗಳನ್ನು ಹೆಚ್ಚಿಸುತ್ತವೆ ಮತ್ತು ಮಣ್ಣಿನಲ್ಲಿರುವ ಪೋಷಕಾ೦ಶಗಳನ್ನು ಹೀರಿಕೊಳ್ಳಲು ಅನುಕೂಲವಾಗುವ೦ತಹ ರೂಪಕ್ಕೆ ಪರಿವರ್ತಿಸಿ ಸಸ್ಯಗಳಿಗೆ ಸುಲಭವಾಗಿ ಲಭ್ಯ ವಾಗುವ೦ತೆ ಮಾಡುತ್ತವೆ. ಒಟ್ಟಾರೆಯಾಗಿ, ಸಸ್ಯಗಳ ಗೆಳವಣಿಗೆಯಲ್ಲಿ ತನ್ನದೇ ಪಾತ್ರವನ್ನು ವಹಿಸಿ ಹೆಚ್ಚಿನ ಇಳುವರಿಗೆ ಕಾರಣವಾಗುತ್ತದೆ. ಇಲ್ಲಿ ತಿಳಿಸಲಾದ ಜೀವಾಣುಗಳು ಶಿಲೀ೦ದ್ರ ಅಥವಾ ಬ್ಯಾಕ್ಟೀರಿಯ ಅಥವಾ ನೀಲಿ ಹಸಿರು ಪಾಚಿ ಅಥವಾ ಇನ್ನು ಯಾವುದಾದರು ರೂಪದಲ್ಲಿ ಇರಬಹುದು. ನೈಟ್ರೋಜನ್ ಫಿಕ್ಸಿಂಗ್ ಬ್ಯಾಕ್ಟೀರಿಯಾ ಗಳಾದ ರೈಜೋಬಿಯಂ ಮತ್ತು ಅಜೋಟೋಬ್ಯಾಕ್ಟರ್, ಶಿಲೀ೦ದ್ರಗಳಾದ ಮೈಕೋರೈಜಾ, ಸೈನೋಬ್ಯಾಕ್ಟೀರಿಯಾ ಗಳಾಗಿರುವ ನೀಲಿ ಹಸಿರು ಪಾಚಿಗಳು ಇವುಗಳಿಗೆ ಉತ್ತಮ ಉದಾಹರಣೆಗಳು.
ಜೈವಿಕ ಗೊಬ್ಬರದ ವಿವಿಧ ಬಗೆಗಳು
ಈ ಜೈವಿಕ ಗೊಬ್ಬರಗಳಲ್ಲಿ ಅಡಗಿರುವ ಉಪಯುಕ್ತ ಸೂಕ್ಷ್ಮ ಣುಜೀವಿ, ಅದರ ಕಾರ್ಯವೈಕರಿ, ಅದು ಒದಗಿಸುವ ಪೊಷಕಾ೦ಶಗಳು ಇನುಗಳಿಗೆ ಅನುಗುಣವಾಗಿ ಕೆಳಗಿನ೦ತೆ ವಿ೦ಗಡಿಸಲಾಗಿದೆ
ಸಸ್ಯ ಸಹಭಾಗಿತ್ವದ ಸಾರಜನಕ ಒದಗಿಸುವಿಕೆ (Symbiotic Nitrogen Fixation):
ಇಲ್ಲಿ ರೈಜೋಬಿಯಂ ಎನ್ನುವ ಹೆಸರಿನ ಬ್ಯಾಕ್ಟೀರಿಯಾ, ಸಸ್ಯಗಳ ಸಹಭಾಗಿತ್ವದೊ೦ದಿಗೆ ಸಾರಜನಕವನ್ನು ಮಣ್ಣಿಗೆ ಸೇರಿಸಿ ಅದನ್ನುಸ್ಥಿರೀಕರಿಸಿ, ಗಿಡ ಮರಗಳಿಗೆ ಲಭ್ಯವಾಗುವ೦ತೆ ಮಾಡುತ್ತದೆ. ಇ೦ತಹ ಸಹಭಾಗಿತ್ವ, ದ್ವಿದಳ ಧಾನ್ಯಗಳ ಗಿಡಗಳೊ೦ದಿಗಷ್ಟೇ ನಡೆಯುತ್ತದೆ. ಕೇವಲ ದ್ವಿದಳ ಧಾನ್ಯಗಳ ಗಿಡಗಳಾಗಲಿ ಅಥವಾ ರೈಜೋಬಿಯಂ ಬ್ಯಾಕ್ಟೀರಿಯಾ ವಾಗಲಿ ಪ್ರತ್ಯೇಖವಾಗಿ ಈ ಪ್ರಕ್ರಿಯೆಯನ್ನು ನಡೆಸಲು ಸಾಧ್ಯವಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಅ೦ಶ. ಇಲ್ಲಿ ಬ್ಯಾಕ್ಟೀರಿಯಾಗಳು ಸಸ್ಯಗಳ ಬೇರನ್ನು ಪ್ರವೇಶಿಸಿ ಸಣ್ಣ ಸಣ್ಣ ಗಡ್ಡೆಗಳನು ಉತ್ಪಾದಿಸುತ್ತವೆ. ಈ ಗಡ್ಡೆಗಳ ಮೂಲಕ ಸಾರಜನಕವನ್ನು ಸ೦ಗ್ರಹಿಸಿ ಗಿಡಗಳಿಗೆ ಒದಗಿಸುತ್ತವೆ. ಬದಲಿಗೆ ಸಸ್ಯಗಳಿ೦ದ ತಮಗೆ ಬೇಕಾದ ಕಾರ್ಬೋಹೈಡ್ರೇಟ್ ಮತ್ತು ಆಮ್ಲಜನಕಗಳನ್ನು ಸಸ್ಯಗಳಿ೦ದ ಪಡೆದುಕೊಳ್ಳುತ್ತವೆ. ಹೀಗೆ ಈ ಪ್ರಕ್ರಿಯೆಯು ಹೆಕ್ಟೆರ್ ಗೆ ಸುಮಾರು 15-400 ಕೆ.ಜಿ ಯಷ್ಟು ಸಾರಜಕವನ್ನು ಒದಗಿಸುವ ಸಾಮರ್ಥ್ಯವನ್ನು ಹೊ೦ದಿದೆ ಎ೦ದು ತಿಳಿಯಲಾಗಿದೆ.
ಸಸ್ಯ ಸಹಭಾಗಿತ್ವ ಇರದ ಸಾರಜನಕ ಒದಗಿಸುವಿಕೆ (Asymbiotic Nitrogen Fixation):
ಇಲ್ಲಿ ಅಜೋಟೋಬ್ಯಾಕ್ಟರ್, ಆಕ್ಸೊಮೊನಾಸ್, ಬೆಜೆರಿಂಕಿಯಾ, ಡರ್ಕ್ಸಿಯಾ, ಮೈಕೋಬ್ಯಾಕ್ಟೀರಿಯಂ, ಅಜೋಸ್ಪಿರುಲಮ್, ಕ್ಲೋಸ್ಟ್ರೋಬಿಮ್, ಕ್ಲೋರೋಬಿಯಂನಂತಹ ಕೆಲವು ಬ್ಯಾಕ್ಟೀರಿಯಾಗಳು ಮಣ್ಣಿನಲ್ಲಿರುವ ಸಾರಜನಕವನ್ನು ಸಸ್ಯಗಳಿಗೆ ಲಭ್ಯವಾಗುವ ರೀತಿಗೆ ಪರಿವರ್ತಿಸುತ್ತವೆ. ಬದಲಾಗಿ ಈ ಬ್ಯಾಕ್ಟೀರಿಯಾಗಳು ಸಸ್ಯಗಳಿ೦ದ ಯಾವುದೇ ಸಹಾಯ ಪಡೆದುಕೊಳ್ಳುವುದಿಲ್ಲ.
ಫಾಸ್ಫೇಟ್ ಒದಗಿಸುವ ಜೈವಿಕ ಗೊಬ್ಬರಗಳು:
ಅನೇಕ ಸಂದರ್ಭಗಳಲ್ಲಿ ಮಣ್ಣು ಸಾವಯವ ವಸ್ತುಗಳಿ೦ದ ಕೂಡಿದರೂ, ಅದರಲ್ಲಿರುವ ರಂಜಕದ ಅ೦ಶ ಮಾತ್ರ ಸಸ್ಯಗಳು ಸುಲಭವಾಗಿ ಹೀರಿಕೊಳ್ಳುವ ಸ್ವರೂಪದಲ್ಲಿ ಇರುವುದಿಲ್ಲ. ಒದಗಿಸಲಾದ ರ೦ಜಕ ಯುಕ್ತ ರಸಗೊಬ್ಬರವು ಇ೦ತಹ ಸಂದರ್ಭಗಳಲ್ಲಿ ಉಪಯೋಗಕ್ಕೆ ಬಾರದೆ ಹೊಗಬಹುದು. ಇ೦ತಹ ಸಮಯದಲ್ಲಿ ಕೆಲವೊ೦ದು ಸ್ಯೂಡೋಮೊನಸ್ ಮತ್ತು ಬ್ಯಾಸಿಲಸ್ ನ೦ತಹ ಬ್ಯಾಕ್ಟೀರಿಯಾಗಳು, ಪೆನ್ಸಿಲಿಯಮ್ ಮತ್ತು ಆಸ್ಪರ್ಜಿಲಸ್ ನಂತಹ ಶಿಲೀ೦ದ್ರಗಳು ರ೦ಜಕವನ್ನು ಲಸ್ಯ ಲಭ್ಯ ರೀತಿಗೆ ಪರಿವರ್ತಿಸಿ ಮಣ್ಣಿನ ಫಲವತ್ತತೆಯಲನ್ನು ಹೆಚ್ಚಿಸುತ್ತವೆ.
ಮೈಕೋರೈಜಲ್ ಶಿಲೀಂಧ್ರಗಳು:
ಇವು ಗಿಡ ಅಥವಾ ಮರಗಳ ಬೇರುಗಳು ಮತ್ತು ಶಿಲೀ೦ದ್ರಗಳ ಸಹಭಾಗಿತ್ವ ಅವುಗಳ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಇಲ್ಲಿ ಕೆಲವು ಶಿಲೀ೦ದ್ರಗಳು ಸಸ್ಯ ಅಥವಾ ಮರಗಳ ಬೇರುಗಳಿಗೆ ಅ೦ಟಿಕೊ೦ಡು ಅವುಗಳ ಮೇಲ್ಮೈ ಪ್ರದೇಶವನ್ನು ಹೆಚ್ಚಿಸಿ ಪೊಷಕಾ೦ಶಗಳನ್ನು ಹೆಚ್ಚಿನ ರೀತಿಯಲ್ಲಿ ಹೀರಿಕೊಳ್ಳಲು ಸಹಾಯ ಮಾಡುತ್ತವೆ. ನೀಲಗಿರಿ. ಕ್ಯಾಸುರಿನ (ಗಾಳಿಮರ), ಆರಳಿ ಮು೦ತಾದ ಮರಗಳ ಬೇರುಗಳಲ್ಲಿ ಈ ಪ್ರಕ್ರಿಯೆ ಕಒಡುಬರುತ್ತದೆ. ಇನ್ನು ಕೆಲವು ಶಿಲೀ೦ದ್ರಗಳು ಬೀಜಗಳು ಮೊಳಕೆ ಒಡೆಯುವ ಸಂದರ್ಭದಲ್ಲಿಯೇ ಸಸ್ಯಗಳ ಒಳಗೆ ಪ್ರವೇಶಿಸಿ ಮು೦ದೆ ಅವುಗಳ ಪೊಷಕಾ೦ಶಗಳನ್ನು ಹೀರಿಕೊಳ್ಳುವ ಶಕ್ತಿಯನ್ನು ಹೆಚ್ಚಿಸಿ, ಒಟ್ಟಾರೆ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತವೆ. ಕೆಲವು ಅರ್ಕಿಡ್ ಸಸ್ಯಗಳಾದ ಲಿಮೊಡೋರಮ್, ವೆನಿಲ್ಲ, ನಿಯೊಶಿಯ ಮು೦ತಾದವುಗಳಲ್ಲಿ ಇದು ಕ೦ಡುಬರುತ್ತದೆ.